ಸಂಸತ್ತಿನಲ್ಲಿನ ಕುತೂಹಲಕಾರಿ ಪ್ರಹಸನದ ನಂತರದ ಯುಪಿಎ ಸರಕಾರದ ವಿಶ್ವಾಸಮತದ ಗೆಲುವು ಭಾರತ ಅಮೆರಿಕ ಪರಮಾಣು ಒಪ್ಪಂದ ಮುಂದುವರಿಕೆಯ ಸ್ಪಷ್ಟ ಸೂಚನೆಯೆಂಬಂತೆ, ಅಮೆರಿಕನ್ ಅಧ್ಯಕ್ಷ ಜಾರ್ಜ್ ಬುಷ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗುರುವಾರ ರಾತ್ರಿ ಕರೆ ಮಾಡಿ ಒಪ್ಪಂದದ ಕುರಿತಾಗಿ ಮಾತುಕತೆ ನಡೆಸಿದ್ದಾರೆ.
ಸಾಧ್ಯವಾದಷ್ಟು ಶೀಘ್ರದಲ್ಲಿ ಒಪ್ಪಂದ ಮುಂದುವರಿಸುವ ಆಶಯವನ್ನು ಇದೇ ವೇಳೆ ಎರಡೂ ನಾಯಕರು ವ್ಯಕ್ತಪಡಿಸಿರುವುದಾಗಿ ಅಮೆರಿಕ ರಾಷ್ಟ್ರೀಯ ರಕ್ಷಣಾ ಸಮಿತಿಯ ವಕ್ತಾರ ಗಾರ್ಡನ್ ಜಾಂಡ್ರೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೆರಿಕ ಮತ್ತು ಭಾರತ ನಡುವಿನ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸಲು ಮನಮೋಹನ್ ಸಿಂಗ್ ಸರಕಾರದೊಂದಿಗಿನ ತನ್ನ ಕಾರ್ಯವನ್ನು ಇನ್ನಷ್ಟು ವೃದ್ಧಿಗೊಳಿಸುವತ್ತ ತಾನು ದೃಷ್ಟಿ ಹಾಯಿಸಿರುವುದಾಗಿ ಅಮೆರಿಕ ಅಧ್ಯಕ್ಷ ಬುಷ್, ಪ್ರಧಾನಿ ಸಿಂಗ್ ಅವರಿಗೆ ಹೇಳಿದ್ದು, ಇದರೊಂದಿಗೆ ಸ್ಥಗಿತಗೊಂಡಿರುವ ವಿಶ್ವ ವ್ಯಾಪಾರ ಸಂಸ್ಥೆ ಮಾತುಕತೆಯ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿರುವುದಾಗಿ ಜಾಂಡ್ರೋ ಹೇಳಿದ್ದಾರೆ.
ಒಪ್ಪಂದವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ದೋಹಾ ಸುತ್ತಿನ ಮಾತುಕತೆಯ ಹಾದಿಯನ್ನು ಸುಗಮವಾಗಿಸುವ ನಿಟ್ಟಿನಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಸದಸ್ಯರ ಕೊಡುಗೆಯ ಬಗ್ಗೆ ಬುಷ್ ಮತ್ತು ಸಿಂಗ್ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ.
ಭಾರತದ ನೆರೆಯ ರಾಷ್ಟ್ರ ಮತ್ತು ಅಣುಒಪ್ಪಂದವನ್ನು ವಿರೋಧಿಸುತ್ತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರೊಂದಿಗೆ ಶ್ವೇತಭವನವು ಮಾತುಕತೆ ನಡೆಸಲಿದ್ದು ಇದಕ್ಕೆ ಪೂರ್ವಾಭಾವಿಯಾಗಿ ಬುಷ್ ಮತ್ತು ಸಿಂಗ್ ನಡುವೆ ದೂರವಾಣಿ ಮಾತುಕತೆ ನಡೆದಿದೆ.
|