ಕಳೆದ ಜುಲೈನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ವಿಶ್ವಾಸ ಮತಯಾಚಿಸಿದ್ದ ವೇಳೆ ನಡೆದಿರುವ ವೋಟಿಗಾಗಿ ನೋಟು ಪ್ರಕರಣವನ್ನು ಗೃಹ ಸಚಿವಾಲಯದ ತನಿಖೆಗೆ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಶಿಫಾರಸ್ಸು ಮಾಡಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಸಹಚರ ಎನ್ನಲಾಗಿರುವ ಸಂಜೀವ್ ಸಕ್ಸೇನ, ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರ ನಿಕಟವರ್ತಿ ಎನ್ನಲಾಗಿರುವ ಸುಧೀಂದ್ರ ಕುಲಕರ್ಣಿ ಹಾಗೂ ಸುಹೈಲ್ ಹಿಂದೂಸ್ತಾನಿ ಅವರ ವಿರುದ್ಧ ತನಿಖೆ ನಡೆಸುವಂತೆ ಗೃಹಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇವರು ವಹಿಸಿರುವ ಪಾತ್ರದ ಕುರಿತು ಇನ್ನಷ್ಟು ತನಿಖೆಯ ಅಗತ್ಯವಿದೆ ಎಂದು ಸಂಸದೀಯ ಸಮಿತಿ ಹೇಳಿರುವ ಒಂದು ದಿನದ ಬಳಿಕ, ಚಟರ್ಜಿ ಈ ಶಿಫಾರಸ್ಸು ಮಾಡಿದ್ದಾರೆ.
ವಿ.ಕಿಶೋರ್ ಚಂದ್ರ ದಿಯೋ ನೇತೃತ್ವದ ಸಂಸದೀಯ ಸಮಿತಿಯು ಪ್ರಕರಣದ ತನಿಖೆ ನಡೆಸಿದ್ದು ಅಮರ್ ಸಿಂಗ್ ಮತ್ತು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅರಿಗೆ ಕ್ಲೀನ್ ಚಿಟ್ ನೀಡಿತ್ತು. ಬಿಜೆಪಿ ಸಂಸದರಿಗೆ ಹಣ ರವಾನಿಸಿರುವ ಇವರ ವಿರುದ್ಧ ರಚನಾತ್ಮಕ ಪುರಾವೆಗಳು ಲಭಿಸಿಲ್ಲ ಎಂದು ತನಿಖಾ ಸಮಿತಿ ಹೇಳಿತ್ತು.
ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎಂದು ಹೇಳಲಾಗಿರುವ ವ್ಯಕ್ತಿಗಳ ಕುರಿತು ನೀಡಿರುವ ಪುರಾವೆಯು ಮನವರಿಕೆಯಾಗುವಂತಹುದಲ್ಲ. ಹಾಗಾಗಿ ಈ ಕುರಿತು ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಸಂಸದೀಯ ಸಮಿತಿ ಶಿಫಾರಸ್ಸು ಮಾಡಿತ್ತು.
ಅದರನ್ವಯ ತಾನು ಈ ಪ್ರಕರಣದ ತನಿಖೆಗಾಗಿ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡುವುದಾಗಿ ಚಟರ್ಜಿ ಹೇಳಿದ್ದಾರೆ.
|