ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಹೇಳಿರುವ ಭಾರತ, ಪಾಕಿಸ್ತಾನವು ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರವಾದಿ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಮುಂದುವರಿಯಲು ಸಾಧ್ಯ ಎಂದು ಹೇಳಿದೆ.
ಮುಂಬೈ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಗ್ರ ಮಾತುಕತೆ ಸ್ಥಗಿತಕೊಂಡಿದೆ ಎಂದು ಪ್ರಣಬ್ ಮುಖರ್ಜಿ ಕಾಶ್ಮೀರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಸಮಗ್ರ ಮಾತುಕತೆಯು 2004ರಲ್ಲಿ ಆರಂಭಗೊಂಡಿತ್ತು. ಅಣ್ವಸ್ತ್ರ ಶಕ್ತ ಉಭಯ ರಾಷ್ಟ್ರಗಳು, ಪಾಕಿಸ್ತಾನ ಮೂಲದ ಉಗ್ರವಾದಿ ಸಂಘಟನೆಗಳು ಸಂಸತ್ತಿನ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಯುದ್ಧದಂಚಿಗೆ ಬಂದು ನಿಂತ ಬಳಿಕ ಸಮಗ್ರ ಮಾತಕತೆಗಳು ಆರಂಭಗೊಂಡಿದ್ದವು.
ಕಳೆದ ತಿಂಗಳು ಮುಂಬೈಯಲ್ಲಿ 179 ಮಂದಿಯನ್ನು ಬಲಿತೆಗೆದುಕೊಂಡ ಉಗ್ರಗಾಮಿ ದಾಳಿಗಳು ನಡೆದ ಬಳಿಕ ಸಮಗ್ರ ಮಾತುಕತೆ ಅಪಾಯಕ್ಕೆ ಸಿಲುಕಿದೆ. ಈ ದಾಳಿಗೆ ಪಾಕಿಸ್ತಾನ ಮೂಲದ ಉಗ್ರವಾದಿ ಸಂಘಟನೆ ಲಷ್ಕರೆ -ಇ-ತೋಯ್ಬಾ ಕಾರಣ ಎಂದು ಭಾರತ ಆಪಾದಿಸಿದೆ.
|