ಆಡಳಿತ ವಿರೋಧಿ ಅಲೆಯನ್ನು ಬದಿಗೆ ಸರಿಸಿ, ಸತತ ಮೂರನೆ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರುವಲ್ಲಿ ದಾಖಲೆ ಬರೆದಿರುವ ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ತೃತೀಯ ಬಾರಿಗೆ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.ತನ್ನ ಪಕ್ಷದೊಳಗಿಂದಲೇ ಬಂಡಾಯ ಎದುರಿಸಿದ್ದ ಶೀಲಾ ಅವರು ಮತದಾರರನ್ನು ಗೆದ್ದಿದ್ದಾರೆ. 2003ರಿಂದಲೂ ದೆಹಲಿ ಗದ್ದುಗೆಯಲ್ಲಿ ಶೀಲಾದೀಕ್ಷಿತ್ ವಿರಾಜಮಾನರಾಗಿದ್ದಾರೆ.ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಢಾಣಾಡಂಗೂರ ಸಾರದೇ ಇದ್ದರೂ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೀಲಾ ಅವರು ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂಬ ಸುಳಿವು ಮತದಾರರಿಗೆ ಇತ್ತು.ಪುರಾತನ ಪಕ್ಷ ಕಾಂಗ್ರೆಸ್‌ನಿಂದ ಮೊಹನ್ ಲಾಲ್ ಸುಖಾಡಿಯಾ ಅವರನ್ನು ಹೊರತುಪಡಿಸಿದರೆ ಇಷ್ಟು ದೀರ್ಘ ಅವಧಿಗೆ ಅಧಿಕಾರ ಅನುಭವಿಸುತ್ತಿರುವ ವ್ಯಕ್ತಿ ಶೀಲಾ ಅವರೇ ಆಗಿದ್ದಾರೆ. ಸುಖಾಡಿಯ ಅವರು 17 ವರ್ಷಗಳ ಕಾಲ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಇನ್ನೋರ್ವ ನಾಯಕ ಕೃಷ್ಣಾ ಸಿನ್ನಾ ಅವರು 14 ವರ್ಷಗಳ ಸುದೀರ್ಘ ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದರು.ಕಪುರ್ತಲ ಜಿಲ್ಲೆಯಲ್ಲಿ ರಾಜಕಿಯೇತರ ಕುಟುಂಬದಲ್ಲಿ 1938 ಮಾರ್ಚ್ 31ರಲ್ಲಿ ಜನಿಸಿರುವ ದೀಕ್ಷಿತ್ ತಮ್ಮ ಹೆತ್ತವರ ಮೂರು ಮಗಳಂದಿರಲ್ಲಿ ಹಿರಿಯವರು. ಇವರು ವಿನೋದ್ ದೀಕ್ಷಿತ್ ಅವರನ್ನು ವಿವಾಹವಾದ ಬಳಿಕ ರಾಜಕೀಯ ರಂಗಕ್ಕಿಳಿದಿದ್ದರು. ಐಎಎಸ್ ಅಧಿಕಾರಿಯಾಗಿದ್ದ ವಿನೋದ್ ದೀಕ್ಷಿತ್ ಅವರು ಮಾಜಿ ಕೇಂದ್ರ ಸಚಿವ ಉಮಾಶಂಕರ್ ದೀಕ್ಷಿತ್ ಅವರ ಪುತ್ರ. |