ಬಿಜೆಪಿ ಮತ್ತು ಆಡಳಿತ ಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ಬಳಿಕ ಲೋಕಸಭೆಯು ಬುಧವಾರ ಅಂಗೀಕರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ರಚನೆ ವಿಧೇಯಕ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ತಿದ್ದುಪಡಿ ವಿಧೇಯಕಗಳು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಕಾಯುತ್ತಿದೆ.
ಲೋಕಸಭೆಯಲ್ಲಿ ಬುಧವಾರ ಸಂಜೆ ಈ ವಿಧೇಯಕಗಳಿಗೆ ಸರ್ವಾನುಮತದ ಬೆಂಬಲ ದೊರಕಿದ್ದು, ಕಾನೂನಿನ ಅಗತ್ಯತೆಗಳು, ಶಿಕ್ಷೆಯ ಪ್ರಮಾಣ, ತನಿಖಾ ಏಜೆನ್ಸಿ ಮತ್ತು ನ್ಯಾಯಯುತ ವಿಚಾರಣೆ ಹಾಗೂ ಮಾನವ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ ಎಂದು ಕೇಂದ್ರ ಸರಕಾರವು ಭರವಸೆ ನೀಡಿತು.
ದಿನಪೂರ್ತಿ ನಡೆದ ಚರ್ಚೆಯ ಬಳಿಕ ಉತ್ತರಿಸುತ್ತಾ ಕೇಂದ್ರದ ನೂತನ ಗೃಹ ಸಚಿವ ಪಿ.ಚಿದಂಬರಂ, ಕಠಿಣವಾದ ಹೊಸ ಕಾನೂನಿನ ದುರುಪಯೋಗವಾಗುವ ಕುರಿತ ಆತಂಕಗಳನ್ನು ನಿವಾರಿಸಲು ಪ್ರಯತ್ನಿಸಿದರು.
ಯುಎಪಿಎಯು ಪೋಟಾ ಕಾನೂನಿನಂತಲ್ಲ, ಹೊಸ ಸಾಧ್ಯತೆಗಳನ್ನು ಕೋಮುವಾದದ ಮನೋಭಾವದೊಂದಿಗೆ ನೋಡಬಾರದು ಎಂದ ಚಿದಂಬರಂ, ಈ ವಿಧೇಯಕಗಳನ್ನು ಸರ್ವಾನುಮತದಿಂದ ಅಂಗೀಕರಿಸುವ ಮೂಲಕ ಏಕತೆ ಪ್ರದರ್ಶಿಸೋಣ ಎಂದು ಕೋರಿಕೊಂಡರು.
ಕೇಂದ್ರ ಸರಕಾರವು ಕೊನೆಗೂ ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕಾನೂನಿನ ಅಗತ್ಯವಿಲ್ಲ ಎಂಬ ತಮ್ಮ ಕಹಿಗುಳಿಗೆಗಳನ್ನು ತಾನೇ ನುಂಗಬೇಕಾಗಿ ಬಂದಿದೆ. ಈ ಹಿಂದೆ ಇಂಥ ಕಾನೂನುಗಳನ್ನು ವಿರೋಧಿಸಿದ್ದ ಯುಪಿಎ ಸರಕಾರ, ಈಗ ಎಚ್ಚೆತ್ತುಕೊಂಡು, ಭಯೋತ್ಪಾದನೆ ನಿಗ್ರಹದ ಗಂಭೀರತೆಯನ್ನು ಅರಿತುಕೊಂಡಿದೆ ಎಂದು ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ವಾದ ಮಂಡನೆ ಸಂದರ್ಭ ಸರಕಾರವನ್ನು ಚುಚ್ಚಿದರು.
ವಿಶೇಷ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ಎಂದು ಕಲ್ಪಿಸಿಕೊಂಡಿರುವ ಕಾಂಗ್ರೆಸ್ ಇದುವರೆಗೆ ಇಂಥ ಕಾನೂನಿಗೆ ವಿಳಂಬ ಧೋರಣೆ ಅನುಸರಿಸಿತು ಎಂದು ಟೀಕಿಸಿದ ಆಡ್ವಾಣಿ, ನಾವು (ಹಿಂದಿನ ಎನ್‌ಡಿಎ ಸರಕಾರ) ಪೋಟಾ ಜಾರಿಗೆ ತಂದಾಗ, ನಾವೇನೋ ಪಾಪ ಮಾಡುತ್ತಿದ್ದೇವೆ ಎಂಬ ಮಾದರಿಯಲ್ಲಿ ನಮ್ಮನ್ನು ಟೀಕಿಸಲಾಯಿತು. ಕಾಂಗ್ರೆಸಿಗೆ ತನ್ನ ನಿಲುವು ಬದಲಿಸಿಕೊಳ್ಳಲು 10 ವರ್ಷಗಳಷ್ಟು ಸುದೀರ್ಘ ಕಾಲ ಬೇಕಾಯಿತು ಎಂದು ವಿಷಾದಿಸಿದರು.
ವಿಶೇಷ ಕಾನೂನಿಗಳಿಗೂ ಅಲ್ಪಸಂಖ್ಯಾತ ವಿಷಯವನ್ನು ಎಳೆದುತರುವ ಕಾಂಗ್ರೆಸ್ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಪೋಟಾ ಕೋಮುವಾದಿ ಕಾಯಿದೆಯಾಗಿತ್ತು ಮತ್ತು ನೀವು ತಂದ ಕಾನೂನು ಜಾತ್ಯತೀತವಾದುದು ಎಂದು ಹೇಳಿಕೊಳ್ಳಲಾರಿರಿ ಎಂದು ಭಾವಿಸುವುದಾಗಿ ನುಡಿದರು. ಪೋಟಾ ಕಾನೂನು ರದ್ದುಪಡಿಸಿರುವುದೇ ನಮ್ಮ ಸಾಧನೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಟಾಂ-ಟಾಂ ಮಾಡಿದ್ದರು. ಮುಂಬಯಿ ಮೇಲಾದ ದಾಳಿಯ ಕಾರಣಕ್ಕಾಗಿಯೇ ಈಗ ಕಾಂಗ್ರೆಸ್ ತನ್ನ ನಿಲುವು ಬದಲಿಸಿತೇ ಎಂದು ಪ್ರಶ್ನಿಸಿದ ಅವರು, ಪಾಕಿಸ್ತಾನವು ಭಯೋತ್ಪಾದನೆಯ ಪೋಷಕ ಎಂದು ಜಗತ್ತಿಗೇ ತೋರಿಸಿಕೊಡಲು ತೀವ್ರವಾಗಿ ಶ್ರಮಿಸಿದ ಬಳಿಕವೂ, ಪಾಕ್ ಕೂಡ ಭಯೋತ್ಪಾದನೆಯ ಬಲಿಪಶು ಎಂಬ ನಿಮ್ಮ (ಪ್ರಧಾನಿ) ಹೇಳಿಕೆಯಿಂದ ನನಗೆ ತೀರಾ ಅಘಾತವಾಗಿತ್ತು. ಇಂದು ನೀವು ನಿಲುವು ಬದಲಾಯಿಸಿರುವುದರಿಂದ ನನಗೆ ತೀರಾ ಸಂತೋಷವಾಗಿದೆ ಎಂದು ಹೇಳಿದರು.
ಆಡಳಿತ ಪಕ್ಷದಿಂದ, ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಅವರು ಪ್ರಚೋದಕ ಹೇಳಿಕೆಗಳನ್ನು ನೀಡುತ್ತಾ ಚರ್ಚೆಯನ್ನು ಜೀವಂತವಾಗಿರಿಸಿದರು. ನೀವು ನಿದ್ದೆ ಮಾಡಿದ್ರಿ, ಕಾರ್ಗಿಲ್ ಪ್ರಕರಣ ಘಟಿಸಲು ಅವಕಾಶ ಮಾಡಿಕೊಟ್ಟಿರಿ ಎಂದು ಬಿಜೆಪಿಯನ್ನು ಉದ್ದೇಶಿಸಿ ಲಾಲು ಟೀಕಿಸಿದರು.
ಕಪಿಲ್ ಸಿಬಲ್ ಮಾತನಾಡಿ, ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಮೌಲಾನ ಮಸೂದ್ ಅಜರ್ ಬಿಡುಗಡೆ ಮಾಡಿದ್ದರಿಂದಾಗಿ ಜೈಷ್ ಎ ಮೊಹಮದ್ ಸಂಘಟನೆ ಹುಟ್ಟಿಕೊಂಡು 2001ರಲ್ಲಿ ಸಂಸತ್ ಮೇಲಿನ ದಾಳಿಗೆ ಕಾರಣವಾಯಿತು ಎಂದು ಎನ್‌ಡಿಎ ವಿರುದ್ಧ ಹರಿಹಾಯ್ದರು. ಮಾತ್ರವಲ್ಲ, ಪೋಟಾ ಕಾಯಿದೆ ಇದ್ದಾಗ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಾಯಿತೇ ಎಂದೂ ಪ್ರಶ್ನಿಸಿದರು. ಬಿಜೆಪಿಯು ಟಾಡಾ ಕಾನೂನಿಗೆ ಒಂದಷ್ಟು ತಿದ್ದುಪಡಿ ತಂದು ಪೋಟಾ ಕಾಯಿದೆ ರೂಪಿಸಿತು. ಅದೇ ರೀತಿಯಲ್ಲಿ, ಪೋಟಾದಲ್ಲಿರುವ ಕಠಿಣ ಕ್ರಮವಾದ ತಪ್ಪೊಪ್ಪಿಗೆಯ ಅಂಗೀಕಾರದಂತಹ ಕ್ರಮಗಳನ್ನು ಹೊಸ ಕಾನೂನಿನಲ್ಲಿ ಕೈಬಿಡಲಾಗಿದೆ ಎಂದರು. |