ನವದೆಹಲಿ: ಎಪ್ಪತ್ತೈದರ ಹರೆಯದ ನಿವೃತ್ತ ಪ್ರೊಫೆಸರ್ ಒಬ್ಬರು ಸಮಯ ಪ್ರಜ್ಞೆ ಮೆರೆದು ಸಶಸ್ತ್ರ ದರೋಡೆಕೋರರೊಂದಿಗೆ ಯಶಸ್ವಿ ಹೋರಾಟ ನಡೆಸಿ ಬ್ಯಾಂಕ್ ದರೋಡೆ ಸಂಚನ್ನು ವಿಫಲಗೊಳಿಸಿರುವ ಧೀರೋದ್ಧಾತ ಘಟನೆ ಸೋಮವಾರ ಅಪರಾಹ್ನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕಲ್ಕಾಜಿ ಶಾಖೆಯಲ್ಲಿ ಸಂಭವಿಸಿದೆ.
ಆ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯೂ ಇಲ್ಲ, ಅಥವಾ ಖಡ್ಡಾಯವಾಗಿರುವ ಸಿಸಿಟಿವಿ ಕ್ಯಾಮರಾಗಳೂ ಇಲ್ಲ. ಹಾಗಾಗಿ ದರೋಡೆಕೋರರನ್ನು ತಡೆಯುವವರು ಯಾರೂ ಇರಲಿಲ್ಲ. ಈ ಖದೀಮರು ಇತ್ತೀಚೆಗೆ ಯೂಕೋ ಬ್ಯಾಂಕನ್ನು ಯಶಸ್ವಿಯಾಗಿ ದೋಚಿದ್ದರು. ಆದರೆ ಈ ಸರ್ತಿ ಅವರ ಆಟ ನಡೆಯಲು ನಿವೃತ್ತ ಪ್ರಾಣಿಶಾಸ್ತ್ರ ಪ್ರೊಫೆಸರ್ ಮಹಾರಾಜ್ ಕೃಷ್ಣ ಕಪೂರ್ ಆವಕಾಶ ನೀಡಲಿಲ್ಲ.
ಮೀರತ್ ಮೂಲದ ಇಶ್ತಾಕ್(25), ಶಾರ್ಪ್ ಶೂಟರ್ ಮಜೀದ್(24), ಅಹ್ಮದ್ ಸಯೀದ್(30), ಮತ್ತು ಕಿರಣ್ ಪಾಲ್(25) ಎಂಬ ಮೀರತ್ ಮೂಲದ ನಾಲ್ವರು ದರೋಡೆಕೋರರು ದೇಶಬಂದು ಕಾಲೇಜಿನ ಎದುರಿರುವ ಬ್ಯಾಂಕ್ ದೋಚುವ ಯೋಜನೆ ಹಾಕಿದ್ದರು.
ದರೋಡೆ ಗ್ಯಾಂಗಿನ ಮುಖ್ಯಸ್ಥ ಬ್ಯಾಂಕಿಗೆ ನುಗ್ಗಿ ನೇರವಾಗಿ ಮ್ಯಾನೇಜರ್ ಕೊಠಡಿಗೆ ನುಗ್ಗಿದ್ದ ವೇಳೆ ಇದನ್ನು ಕಂಡ ಕಪೂರ್ ಅವರು ಮ್ಯಾನೇಜರ್ ಕೊಠಡಿಗೆ ನುಗ್ಗಿ ಕಳ್ಳನ ಕತ್ತು ಪಟ್ಟಿ ಹಿಡಿದಿದ್ದರು. ಆತ ಪ್ರತಿಕ್ರಿಯಿಸಲು ಅಸಾಧ್ಯವಾಗಿದ್ದು, ಬಳಿಕ ಆತನನ್ನು ಹೊರಗೆಳೆದು ತಂದಿದ್ದರು. ಆದರೆ ಕೈಯಲ್ಲಿ ಪಿಸ್ತೂಲು ಹಿಡಿದಿದ್ದ ಕಳ್ಳ ಅಲ್ಲಿಂದ ಪರಾರಿಯಾದ. ಆ ಕ್ಷಣದಲ್ಲಿ ಅಲ್ಲಿಂದ ಕಳ್ಳರು ಪರಾರಿಯಾಗಿದ್ದರೂ, ಬಳಿಕ ಬಳಿಕ ಬೈಕ್ ಒಯ್ಯಲು ಮರಳಿ ಬಂದ ವೇಳೆ ವ್ಯೂಹ ನಡೆಸಿದ ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. |