ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜನೀತಿ ಎಂಬಂತೆ ಬಳಸುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೂರಿದ್ದಾರೆ.
ಪಾಕಿಸ್ತಾನದ ವಿರುದ್ಧ ಕಠಿಣ ಶಬ್ದಗಳನ್ನು ಬಳಸಿದ ಅವರು, ಪಾಕಿಸ್ತಾನ ಯುದ್ಧೋನ್ಮಾದವನ್ನು ಸೃಷ್ಟಿಸುತ್ತಿದೆ ಎಂದೂ ಆರೋಪಿಸಿದರು. ಮುಂಬೈದಾಳಿಯಲ್ಲಿ ಲಷ್ಕರೆ ಸಂಘಟನೆಯ ಕೈವಾಡ ಸ್ಪಷ್ಟ ಎಂದು ಹೇಳಿದ ಪ್ರಧಾನಿ ಇಂತಹ ದಾಳಿಯ ಹಿಂದೆ ಪಾಕಿಸ್ತಾನದ ಅಧಿಕಾರಗಳ ಸಹಾಯವಿರಬಹುದು ಎಂದೂ ಹೇಳಿದ್ದಾರೆ.
ಪಾಕಿಸ್ತಾನವು ಯುದ್ಧಾಂತಕವನ್ನು ಹುಟ್ಟಿಸುತ್ತಿದ್ದರೂ, ನಮ್ಮ ದೇಶವು ಒಗ್ಗಟ್ಟಿನಿಂದಿದೆ ಮತ್ತು ರಾಷ್ಟ್ರೀಯ ಏಕತೆಯ ಯಾವುದೇ ಪ್ರಕ್ರಿಯೆ ದೃಢವಾಗುತ್ತಿದೆ ಎಂದು ಹೇಳಿದರು.
ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ಸ್ವರ್ಗವಾಗಿದೆ ಮತ್ತು ಉಗ್ರಗಾಮಿ ಶಕ್ತಿಗಳಿಗೆ ಅಭಯಧಾಮವಾಗಿದೆ ಎಂದೂ ಅವರು ಟೀಕಿಸಿದರು. ಭಾರತದಲ್ಲಿನ ಅಸ್ಥಿರತೆಯ ಸಂದೇಶ ನೀಡುವ ಉದ್ದೇಶದಲ್ಲಿ ದಾಳಿಯ ವೇಳೆಗೆ ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದೂ ಅವರು ದೂರಿದರು.
ರಾಷ್ಟ್ರದ ಈಶಾನ್ಯ ಪ್ರಾಂತ್ಯದ ಉಗ್ರರಿಗೆ ನೆರೆಯ ರಾಷ್ಟ್ರ ಆಶ್ರಯ ನೀಡುತ್ತದೆ ಎಂದು ಅವರು ಬಾಂಗ್ಲಾದೇಶವನ್ನು ಪ್ರಸ್ತಾಪಿಸಿದರು. ನೇಪಾಳ ಹಾಗೂ ಗಡಿನಿಯಂತ್ರಣ ರೇಖೆಯ ಮೂಲಕ ಭಾರತದೊಳಕ್ಕೆ ಅಕ್ರಮ ನುಸುಳುವಿಕೆ ನಡೆಯುತ್ತಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನೆರೆಯ ದೇಶಗಳಲ್ಲೂ ಭದ್ರತಾ ಸ್ಥಿತಿ ಅನುಕೂಲಕರವಾಗಿಲ್ಲ ಮತ್ತು ಕೆಲವು ರಾಷ್ಟ್ರಗಳ ಸ್ಥಿತಿ ತುಂಬ ಸೂಕ್ಷ್ಮವಾಗಿದೆ ಎಂದವರು ಬೆಟ್ಟು ಮಾಡಿದರು.
ಭಯೋತ್ಪಾದನಾ ದಾಳಿಗಳಂತಹ ಪರಿಸ್ಥಿತಿಗಳನ್ನು ನಿರ್ವಹಿಸಲು ಶಾಶ್ವತವಾದ ಬಿಕ್ಕಟ್ಟು ನಿರ್ವಹಣಾ ಪಡೆಯನ್ನು ಸ್ಥಾಪಿಸಲು ಕಾಲಪಕ್ವವಾಗಿದೆ ಮತ್ತು ಗುಪ್ತಚರ ಪಡೆಗಳ ನಡುವೆ ಮಾಹಿತಿ ಹಂಚುವಿಕೆ ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಿಸಿದರು. |