ಜಾರ್ಖಂಡ್‌ನ ತಮರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಫರ್ಧಿಸಿರುವ ಮುಖ್ಯಮಂತ್ರಿ ಶಿಬು ಸೋರೇನ್, ಜಾರ್ಖಂಡ್ ಪಕ್ಷದ ಅಭ್ಯರ್ಥಿ ಗೋಪಾಲ್ ಕೃಷ್ಣ ಪತಾರ್ ವಿರುದ್ಧ ಒಂಬತ್ತು ಸಾವಿರ ಮತಗಳ ಅಂತರಿಂದ ಸೋತು ತೀವ್ರ ಮುಖಭಂಗ ಅನುಭವಿಸಿದ್ದಾರೆ.ಮನಮೋಹನ್ ಸಿಂಗ್ ಅವರ ವಿಶ್ವಾಸ ಮತಯಾಚನೆಯನ್ನು ಬೆಂಬಲಿಸಿದ ಉಡುಗೊರೆ ಎಂಬಂತೆ ಶಿಬು ಸೋರೇನ್ ಜಾರ್ಖಂಡ್ ಮುಖ್ಯಮಂತ್ರಿ ಪದವಿ ಏರಿದ್ದರು. ಇದೀಗ ಈ ಸೋಲು ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರಬಹುದು ಎಂದು ಊಹಿಸಲಾಗಿದೆ. ಆಡಳಿತಾರೂಢ ಯುಪಿಎ ಮೈತ್ರಿಕೂಟದ ಹಲವಾರು ಮಂದಿ ಶಿಬು ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ವೇಳೆ ಯುಪಿಎ ಮೈತ್ರಿ ಕೂಟಕ್ಕೆ ಬೆಂಬಲ ನೀಡಿದ ಜಾರ್ಖಂಡ್ ಮುಕ್ತಿ ಮೋರ್ಚಾದ ವರಿಷ್ಠ ಶಿಬು ಅವರು ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ತನ್ನ ಕೇಂದ್ರ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ಪ್ರಧಾನಿ ಸಿಂಗ್ ಅವರು ಕಳೆದ ಜುಲೈ 22ರಂದು ವಿಶ್ವಾಸಮತ ಯಾಚಿಸಿದ ವೇಳೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು.ಆದರೆ ಬಳಿಕ ಮನಸ್ಸು ಬದಲಿಸಿದ ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಠಹಿಡಿದಿದ್ದರು. ಅಧಿಕಾರದಲ್ಲಿದ್ದ ಮಧು ಕೋಡಾ ಅವರನ್ನು ಎಳೆದುರುಳಿಸಿ ಕಳೆದ ಆಗಸ್ಟ್ 27ರಂದು ಶಿಬು ಸೊರೇನ್ ಮುಖ್ಯಮಂತ್ರಿ ಗದ್ದುಗೆಗೇರಿದ್ದರು. ಜೆಡಿಯು ಶಾಸಕ ರಮೇಶ್ ಸಿಂಗ್ ಅವರ ನಿಧನದಿಂದಾಗಿ ತಮರ್ ಕ್ಷೇತ್ರ ತೆರವಾಗಿತ್ತು. ಸಿಂಗ್ ಅವರು ಕಳೆದ ಜುಲೈಯಲ್ಲಿ ಶಂಕಿತ ನಕ್ಸರ ಗುಂಡಿಗಾಹುತಿಯಾಗಿದ್ದರು. |