" ಭಾರತ-ಪಾಕಿಸ್ತಾನದ ಸ್ನೇಹವನ್ನು ವಿರೋಧಿಸುತ್ತಿರುವ ಪಡೆಗಳನ್ನು ಸೋಲಿಸಬೇಕು" ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮವಾಗಿ ತನ್ನ ಕಚೇರಿಗೆ ಆಗಮಿಸಿರುವ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಅಲ್ಲದೆ ತನ್ನ ಸರ್ಕಾರವು ರಾಜ್ಯದಲ್ಲಿ ಏಕತೆಯನ್ನು ಮರಳಿ ಸ್ಥಾಪಿಸಲು ಯತ್ನಿಸಲಿದೆ ಎಂದೂ ತಿಳಿಸಿದ್ದಾರೆ." ತಾನು ಎಚ್ಚರಿಕಾ ಸಲಹೆಯನ್ನು ಮುಂದುವರಿಸಲಿದ್ದೇನೆ, ಪಾಕಿಸ್ತಾನವು ವೈರಿಯಲ್ಲ, ಆದರೆ ಪಾಕಿಸ್ತಾನದಲ್ಲಿರುವ ಶಕ್ತಿಗಳು ಈ ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ದ್ವೇಷಿಸುತ್ತಿವೆ. ನಾವು ಇಂತಹ ಶಕ್ತಿಗಳನ್ನು ಸೋಲಿಸಬೇಕೇ ವಿನಹ ಕಾಶ್ಮೀರವನ್ನಲ್ಲ" ಎಂದು ಅಬ್ದುಲ್ಲಾ ವರದಿಗಾರರಿಗೆ ತಿಳಿಸಿದ್ದಾರೆ.ಮುಂಬೈಯಲ್ಲಿ ನಡೆದಿರುವ ಉಗ್ರಗಾಮಿ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ದಾಳಿಗೆ ಪಾಕಿಸ್ತಾನದ ಭಯೋತ್ಪಾದಕರು ಕಾರಣ ಎಂದು ಭಾರತ ದೂರಿದೆ." ರಾಜ್ಯದ ಅಭಿವೃದ್ಧಿಗೆ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧದ ಅವಶ್ಯಕತೆ ಇದೆ, ಉದ್ವಿಗ್ನತೆಯು ಭಾರತ ಅಥವಾ ಪಾಕಿಸ್ತಾನಕ್ಕೆ ಯಾವುದೇ ಲಾಭ ಉಂಟುಮಾಡುವುದಿಲ್ಲ" ಎಂದು ಒಮರ್ ಅಭಿಪ್ರಾಯಿಸಿದ್ದಾರೆ.ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯ ಮತದಾರರು ಮತಚಲಾಯಿಸಿದ್ದು, ಕಾಂಗ್ರೆಸ್ ಮೈತ್ರಿಯೊಂದಿಗೆ ನ್ಯಾಶನಲ್ ಕಾನ್ಫರೆನ್ಸ್ ಅಧಿಕಾರಕ್ಕೇರುವಂತೆ ಮಾಡಿರುವುದು, ಜಮ್ಮುಕಾಶ್ಮೀರವು ಪ್ರವಾಸಿಗಳನ್ನು ಬರಮಾಡಿಕೊಳ್ಳಲು ಸಿದ್ಧವಾಗಿದೆ ಎಂಬುದಾಗಿ ರಾಷ್ಟ್ರ ಮತ್ತು ವಿಶ್ವಕ್ಕೆ ನೀಡಿದ ಸಂದೇಶವಾಗಿದೆ ಎಂದು ಒಮರ್ ಹೇಳಿದ್ದಾರೆ.ಅಮರ್‌ನಾಥ್ ಭೂವಿವಾದದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಡುವೆ ಉಂಟಾಗಿರುವ ಬಿರುಕನ್ನು ತೊಡೆದು ಹಾಕಿ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯ ಎಸಗುವುದಾಗಿ ನೂತನ ಮುಖ್ಯಮಂತ್ರಿ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಮತ್ತು ಪ್ರತ್ಯೇಕತಾವಾದಿಗಳ ನಡುವೆ ಮಾತುಕತೆಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದಾಗಿ ಅವರು ನುಡಿದರು. |