ಗ್ರಾಮೀಣ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಸಂಸದ ಎಂ. ಜಗನ್ನಾಥ್ ಗುರುವಾರ ಬೇಷರತ್ತಿನ ಕ್ಷಮೆ ಕೇಳಿದ್ದಾರೆ. ರವೀಂದ್ರ ರೆಡ್ಡಿ ವಿರುದ್ಧ ತಮಗೆ ವೈಯಕ್ತಿಕ ದ್ವೇಷವಿಲ್ಲ. ಇದೊಂದು ದುರದೃಷ್ಟಕಾರಿ ಘಟನೆ, ಸತ್ಯಾಂಶ ಕಡೆಗೆ ಬಯಲಾಗುತ್ತದೆ.
ಆದಾಗ್ಯೂ, ತಾವು ಈ ಘಟನೆಗೆ ತೆರೆಎಳೆಯಲು ಬೇಷರತ್ತಿನ ಕ್ಷಮೆ ಕೇಳುವುದಾಗಿ ಅವರು ಹೇಳಿದ್ದಾರೆ.ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಆಂಧ್ರಪ್ರದೇಶ ವ್ಯವಹಾರಗಳ ಉಸ್ತುವಾರಿ ವೀರಪ್ಪ ಮೊಯ್ಲಿ ಅವರಿಗೆ ತಮ್ಮ ನಿಲುವನ್ನು ವಿವರಿಸಲು ನಾಗರಕರ್ನೂಲ್ ಸಂಸದ ಜಗನ್ನಾಥ್ ಈಗ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ. ರವೀಂದ್ರ ರೆಡ್ಡಿಗೆ ಕಪಾಳಮೋಕ್ಷ ಮಾಡಿದ್ದನ್ನು ಕ್ಯಾಮೆರಾಗಳು ಸೆರೆಹಿಡಿದಿದ್ದು, ಈ ಕುರಿತು ವಿವರಣೆ ಕೇಳಲು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಕರೆಕಳುಹಿಸಿತ್ತು.
ಸಂಸದನ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ನಾಯಕತ್ವ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಶ್ರೀನಿವಾಸ್ ಅವರಿಂದ ವರದಿ ತರಿಸಿಕೊಂಡಿತು. ಪರಿಶಿಷ್ಟ ಜಾತಿ ಮತ್ತು ವರ್ಗದ ಫಲಾನುಭವಿಗಳಿಗೆ ಸಾಲ ಮೊತ್ತ ವಿತರಣೆ ಮಾಡುತ್ತಿಲ್ಲವೆಂಬ ದೂರಿನ ಮೇಲೆ ಕಾರಣ ಕೇಳಿದಾಗ ಅವರು ಬ್ಯಾಂಕಿಗೆ ಬರುವಂತೆ ಸವಾಲು ಹಾಕಿದರು.
ಬ್ಯಾಂಕಿಗೆ ತೆರಳಿದಾಗ ಮ್ಯಾನೇಜರ್ ಪ್ರಚೋದನಕಾರಿಯಾಗಿ ಮಾತಾಡಿದರು. ಅವರ ಭುಜದ ಮೇಲೆ ಕೈಇಡಲು ಯತ್ನಿಸಿದಾಗ ಅವರು ದೂಡಿದಾಗ ಆಕಸ್ಮಿಕವಾಗಿ ಕೆನ್ನೆಗೆ ಕೈತಾಗಿದ್ದರಿಂದ ಕೆನ್ನೆಗೆ ಹೊಡೆದಂತೆ ಭಾಸವಾಗಿದೆಯೆಂದು ಜಗನ್ನಾಥ್ ಸಮಜಾಯಿಷಿ ನೀಡಿದ್ದಾರೆ. |