ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು 3 ದಿನಗಳು ಬಾಕಿ ಉಳಿದಿರುವಂತೆ ವಿವಿಧ ಪಕ್ಷಗಳ ಪ್ರಚಾರ ತಾರಕಕ್ಕೇರಿದ್ದು, ಎಂಎನ್‌ಎಸ್ ಮುಖಂಡ ರಾಜ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ರಾಜ್ ತಮ್ಮ ಚುನಾವಣೆ ಪ್ರಚಾರದಲ್ಲಿ ಸೋನಿಯ ಗಾಂಧಿ ಅವರ ಪ್ರಚಾರ ವೈಖರಿಯನ್ನು ಅನುಕರಿಸುತ್ತಾ, ರಾಜ್ಯ ಸರ್ಕಾರ ಮರಾಠಿಗಳನ್ನು ಕಡೆಗಣಿಸುತ್ತಿದೆಯೆಂದು ಆರೋಪಿಸಿದರು.
ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಬಂಡವಾಳ ಆಕರ್ಷಿಸಲು ವಿಫಲವಾಗಿದೆ. ರಾಜಕೀಯ ಪಕ್ಷಗಳು ಮರಾಠಿ ಮಾನೂಗಳನ್ನು ಹಗುರವಾಗಿ ಪರಿಗಣಿಸಿವೆಯೆಂದು ಕಿಡಿ ಕಾರಿದರು.
ಬಿಜೆಪಿಯನ್ನೂ ಅವರು ಬಿಡದೇ, ಲೋಕಸಭೆ ಚುನಾವಣೆಯಲ್ಲಿ ಲವಲೇಶ ಯಶಸ್ಸು ಪಡೆಯದ ಬಿಜೆಪಿಗೆ ಮರಾಠಿ ಮಾನೂಗಳ ಬಗ್ಗೆ ಅಕ್ಕರೆ ಬಂದಿದೆಯೆಂದು ವ್ಯಂಗ್ಯವಾಡಿದರು. ಶುಕ್ರವಾರ ಸಂಜೆ ಕೂಡ ರಾಜ್ ಮತ್ತು ಶಿವಸೇನೆ ಕಾರ್ಯಕಾರಿ ಅಧ್ಯಕ್ಷ ಉದ್ಧವ್ ಠಾಕ್ರೆ ಏಕಕಾಲದ ರ‌್ಯಾಲಿಗಳಲ್ಲಿ ಪರಸ್ಪರ ಕೆಸರೆರಚಿದರು. ರಾಜ್ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ, ಉದ್ಧವ್ ಅವರ ಪ್ರಚಾರದ ಶೈಲಿಯನ್ನು ಟೀಕಿಸಿದರು.
ಇದು ಚುನಾವಣೆಯಾಗಿದ್ದು ಮನರಂಜನೆ ಪ್ರದರ್ಶನವಲ್ಲ. ಆದ್ದರಿಂದ ನಾನು ವೈಯಕ್ತಿಕ ಟೀಕೆ ಮಾಡಲು ಹೋಗುವುದಿಲ್ಲ. ತಮಗೆ ಬೇರೆ ಕೆಲಸಗಳಿವೆಯೆಂದು ಹೇಳಿದ್ದಾರೆ.
ಈ ಮಧ್ಯೆ, ರಾಜ್ ಅವರ ವಿರುದ್ಧ ಟೀಕೆ ಮಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್, ಸೋನಿಯ ಗಾಂಧಿ ಮಾತನಾಡುವ ರೀತಿಯನ್ನು ಮತ್ತು ನಡವಳಿಕೆಯನ್ನು ರಾಜ್ ಅನುಸರಿಸುತ್ತಾರೆ.
ಅವರು ಉತ್ತಮ ನಟರಾಗಲು ಯೋಗ್ಯರು ಮತ್ತು ಒಳ್ಳೆಯ ಹಾಸ್ಯ ಮಾಡುತ್ತಾರಾದರೂ ಸೋನಿಯಾ ಮಟ್ಟಕ್ಕೆ ಬೆಳೆದಿಲ್ಲ. ಕರಣ್ ಜೋಹರ್ ಚಿತ್ರಗಳಲ್ಲಿ ಅವರು ನಟನೆ ಮಾಡಿದರೆ ನಾವು ಪ್ರತಿದಿನವೂ ವೀಕ್ಷಿಸುತ್ತೇವೆಂದು ಅವರು ಗೇಲಿ ಮಾಡಿದ್ದಾರೆ.
ಮಹಾರಾಷ್ಟ್ರ ಅ.13ರಂದು ಚುನಾವಣೆಗೆ ಇಳಿದಿದ್ದು, ಇಬ್ಬರು ಠಾಕ್ರೆ ಸೋದರರ ನಡುವೆ ಒಳಜಗಳದಿಂದ ಆಳುವ ಮೈತ್ರಿಕೂಟಕ್ಕೆ ಖಂಡಿತ ಅನುಕೂಲವಾಗುತ್ತದೆಂದು ತಜ್ಞರು ಹೇಳಿದ್ದಾರೆ.