ಎರಡುದಿನಗಳ ಹಿಂದಷ್ಟೆ ವಿದೇಶದಿಂದ ಮರಳಿರುವ ನರೇಂದ್ರ ಮೋದಿಯವರಿಗೆ ಹಂದಿಜ್ವರದ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಕೆಮ್ಮು, ಶೀತ ಹಾಗೂ ಜ್ವರದ ಲಕ್ಷಣಗಳು ಕಂಡು ಬಂದ ಬಳಿಕ ಅವರ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಯಿತು ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ನಾಲ್ವರು ವೈದ್ಯರ ತಂಡದಲ್ಲೊಬ್ಬರಾಗಿರುವ ಆತುಲ್ ಪಟೇಲ್ ಹೇಳಿದ್ದಾರೆ. ಮೋದಿ ಅವರು ಎಚ್1ಎನ್1 ತಪಾಸಣೆಗೆ ಒತ್ತಾಯಿಸಿದ್ದು, ಅವರ ರಕ್ತದ ತಪಾಸಣೆಯ ಫಲಿತಾಂಶ ಇಂದು ಮುಂಜಾನೆ ಲಭಿಸಿತು ಎಂಬುದಾಗಿ ಅವರು ತಿಳಿಸಿದರು.
ರಶ್ಯಾ ಪ್ರಯಾಣ ಕೈಗೊಂಡಿದ್ದ ಸಿಎಂ ಬುಧವಾರ ವಾಪಾಸ್ಸಾಗಿದ್ದರು. ಮೋದಿಯವರನ್ನು ಅವರ ನಿವಾಸದಲ್ಲಿ ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು ಮತ್ತು ಅಲ್ಲಿಯೇ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಹಂದಿಜ್ವರದ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ಎಲ್ಲಾ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ.
ಮುಖ್ಯಮಂತ್ರಿಯವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿರುವ ವೈದ್ಯರು ಅವರ ಆರೋಗ್ಯದ ಕುರಿತು ಕಳವಳ ಪಡಬೇಕಿರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಗುಜರಾತ್ ಸಚಿವಾಲಯದಲ್ಲಿ ಮುಖ್ಯಮಂತ್ರಿಗಳು ಸಂಪುಟ ಸಭೆಯನ್ನು ನಡೆಸಿದ್ದು, ಅಧಿಕಾರಿಗಳು ಹಾಗೂ ಇತರರನ್ನು ತಡರಾತ್ರಿಯ ತನಕ ಭೇಟಿ ಮಾಡಿದ್ದರು. ಬಳಿಕ ಹೆಚ್ಚಿನ ಜ್ವರಕಂಡು ಬಂದ ಕಾರಣ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ.