ಬಿಜೆಪಿ ಪಕ್ಷದ ತತ್ವಗಳು ಇನ್ನಷ್ಟು ಸಂಕುಚಿತಗೊಳ್ಳುತ್ತಿದ್ದು ಆ ಪಕ್ಷಕ್ಕೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಬಿಜೆಪಿಯಿಂದ ಉಚ್ಚಾಟನೆಗೀಡಾಗಿರುವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಹೇಳಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ತನ್ನನ್ನು ಉಚ್ಚಾಟನೆಗೊಳಿಸಿರುವ ಪಕ್ಷಕ್ಕೆ ನಾನು ವಾಪಾಸ್ಸಾಗುವುದಿಲ್ಲ. ಇದಲ್ಲದೆ, ಇತರ ಯಾವುದೇ ಪಕ್ಷಕ್ಕೆ ಸೇರುವ ಉದ್ದೇಶ ಹೊಂದಿಲ್ಲ" ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಜಸ್ವಂತ್ ಅವರು ಬರೆದ ಇತ್ತೀಚಿನ ಪುಸ್ತಕದಲ್ಲಿ ಅವರು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾರನ್ನು ಹೊಗಳಿದ ಕಾರಣಕ್ಕೆ ಪಕ್ಷದಿಂದ ಹೊರದಬ್ಬಲ್ಪಟ್ಟಿದ್ದರು.
"ಬಿಜೆಪಿ ಚಿಂತನೆಗಳು ಸಂಕುಚಿತಗೊಳ್ಳುತ್ತಿವೆ. ಆ ಪಕ್ಷ ಮತ್ತೆ ಬೆಳೆಯಬೇಕೆಂದರೆ, ಅದು ತನ್ನ ಮೂಲಭೂತ ಚಿಂತನೆಯನ್ನೇ ಬದಲಾಯಿಸಿಕೊಳ್ಳಬೇಕಿರುವ ಅವಶ್ಯಕತೆ ಇದೆ" ಎಂದು ಹೇಳಿದರು.
ಹಿಂದೂ-ಮುಸ್ಲಿಂ ಐಕ್ಯತೆಯೇ ತನ್ನ ಧ್ಯೇಯ ಎಂದಿರುವ ಜಸ್ವಂತ್ ಜಿನ್ನಾರನ್ನು ಹೊಗಳಿರುವುದಕ್ಕೆ ತನಗೆ ಯಾವ ವಿಷಾದವೂ ಇಲ್ಲ ಎಂದು ಹೇಳಿದ್ದಾರೆ.