ದಿಯೋಬಂದ್(ಉ.ಪ್ರ), ಮಂಗಳವಾರ, 3 ನವೆಂಬರ್ 2009( 16:26 IST )
ವಂದೇ ಮಾತರಂ ಹಾಡುವುದು ಇಸ್ಲಾಮ್ ವಿರೋಧಿಯಾಗಿದೆ ಎಂದು ಹೇಳಿರುವ ಜಮಾತೆ-ಇ-ಉಲೇಮಾ ಹಿಂದ್ ಈ ರಾಷ್ಟ್ರಭಕ್ತಿ ಗೀತೆಯ ವಿರುದ್ಧ ಮಸೂದೆಯೊಂದನ್ನು ಅಂಗೀಕರಿಸಿದೆ.
ದಿಯೋಬಂದ್ ರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳವಾರ ಮಸೂದೆಯೊಂದನ್ನು ಅಂಗೀಕರಿಸಿದ್ದು, ಇದರ ಪ್ರಕಾರ ಮುಸ್ಲಿಮರು 'ವಂದೇ ಮಾತರಂ' ಹಾಡಬಾರದು. ಈ ರಾಷ್ಟ್ರಭಕ್ತಿ ಗೀತೆಯ ಕೆಲವು ಸಾಲುಗಳು ಇಸ್ಲಾಮಿಕ್ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕಾರಣ ಜಮಾತ್ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದೆ.
ಗೃಹಸಚಿವ ಪಿ.ಚಿದಂಬರಂ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲು ನಿಗದಿಪಡಿಸಲಾಗಿರುವ ದಿನದಂದೇ ಈ ವಿವಾದಾಸ್ಪದ ಮಸೂದೆಯನ್ನು ಅಂಗೀಕರಿಸಲಾಗಿದೆ.
ಈ ಸಮ್ಮೇಳನವನ್ನು ಸಂಘಟಿಸಿರುವ ಜಮಾತ್-ಇ-ಉಲೇಮಾ ಹಿಂದ್‌ನ ಹಲವು ನಾಯಕರು 'ವಂದೇ ಮಾತರಂ'ನ ವಿರೋಧಿಗಳಾಗಿದ್ದಾರೆ ಎಂದು ಹೇಳಲಾಗಿದೆ. ರಾಜ್ಯಸಭಾ ಸದಸ್ಯ ಹಾಗೂ ಪ್ರಮುಖ ಇಸ್ಲಾಮಿಕ್ ನಾಯಕರೂ ಆಗಿರುವ ಮೆಹ್ಮೂದ್ ಮದನಿ ಅವರೂ ಸಹ ಈ ಗೀತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರು ಅಲ್ಲಾನನ್ನು ಹೊರತುಪಡಿಸಿ ಬೇರೆಯವರಿಗೆ ಪ್ರಾರ್ಥನೆಗಳನ್ನು ಸಲ್ಲಿಸುವಂತಿಲ್ಲ ಎಂದು ಹೇಳಿರುವ ಮುಸ್ಲಿಂ ಕಾನೂನು ಮಂಡಳಿಯೂ ಸಹ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಮಂಡಳಿಯ ಪ್ರಮುಖ ನಾಯಕರಾಗಿರುವ ಕಮಲಾ ಫಾರೂಕಿ ಅವರು "ನಾವು ದೇಶವನ್ನು ಪ್ರೀತಿಸುತ್ತೇವೆ ಆದರೆ ಪೂಜಿಸಲಾಗದು" ಎಂಬುದಾಗಿ ಹೇಳಿದ್ದಾರೆ.
ಸೋಮವಾರ ಆರಂಭಗೊಂಡಿರುವ ಸಮ್ಮೇಳನದಲ್ಲಿ ಭಾಗವಹಿಸಿರುವ ಧಾರ್ಮಿಕ ಮುಖಂಡರಲ್ಲಿ ಒಂದು ಗುಂಪು ವಂದೇ ಮಾತರಂ ವಿರುದ್ಧ ಫತ್ವಾ ಹೊರಡಿಸಬೇಕು ಎಂಬ ಹುಯಿಲೆಬ್ಬಿಸಿದ್ದಾರೆ. ಈ ಪಂಗಡವನ್ನು ಸಮಾಧಾನಗೊಳಿಸಲು ಸಮ್ಮೇಳನದಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.