ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಾರಾಷ್ಟ್ರ ಬಿಕ್ಕಟ್ಟು: ಕಾಂಗ್ರೆಸ್ ಎನ್‌ಸಿಪಿ ಬಾಹ್ಯ ಬೆಂಬಲ (Maharashtra | Ashok Chavan | Chhagan Bhujbal)
Feedback Print Bookmark and Share
 
PTI
ಮುಂಬೈ: ಮುಂಬೈ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಸಿರುವ ಮೈತ್ರಿಕೂಟದ ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್-ಎನ್‌ಸಿಪಿ ನಡುವೆ ಅಧಿಕಾರ ಹಂಚಿಕೆ ಕುರಿತ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು, ಎನ್‌ಸಿಪಿ ಕಾಂಗ್ರೆಸ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವುದಾಗಿ ಹೇಳಿದೆ. ಇದರಿಂದ ಸರ್ಕಾರ ರಚನೆ ವಿಚಾರ ಮತ್ತೂ ನನೆಗುದಿಗೆ ಬಿದ್ದಂತಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರೂಪಿಸುವ ಗಡು ಮಂಗಳವಾರಕ್ಕೆ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆಗೇರಲು ಶಕ್ತವಾಗಿದ್ದರೂ, ಇದೀಗ ಎನ್‌ಸಿಪಿ ಸಂಪುಟದಿಂದ ಹೊರಗುಳಿಯಲು ಬಯಸಿದ್ದರಿಂದ ಹೊಸ ಸರ್ಕಾರದ ಸ್ಥಿರತೆ ಪ್ರಶ್ನಾರ್ಥಕವಾಗಿದೆ.

ರಾಜ್ಯಪಾಲರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಅವರು ಎನ್‌ಸಿಪಿ ಬಾಹ್ಯ ಬೆಂಬಲ ನೀಡಲು ಸಿದ್ಧವಿದೆ ಎಂದು ಹೇಳಿದ್ದಾರೆ. ನಾವು ನಮ್ಮ ಬೆಂಬಲ ಪತ್ರ ನೀಡಲು ಸಿದ್ಧರಿದ್ದೇವೆ ಎಂಬುದಾಗಿ ರಾಜ್ಯಪಾಲರಿಗೆ ತಿಳಿಸಿರುವುದಾಗಿ ಅವರು ತಿಳಿಸಿದ್ದಾರೆ.

"ಖಾತೆ ಹಂಚಿಕೆ ವಿಚಾರ ಬಗೆಹರಿದ ಬಳಿಕ ನಾವು ಸರ್ಕಾರದಲ್ಲಿ ಸೇರ್ಪಡೆಗೊಳ್ಳುತ್ತೇವೆ" ಎಂಬುದಾಗಿ ಅವರು ನುಡಿದರಾದರೂ, ಸರ್ಕಾರ ರೂಪಿಸಲು ವಿಳಂಬವಾಗಲು ಕಾಂಗ್ರೆಸ್‌ನ ತಂತ್ರಗಳೇ ಕಾರಣ ಎಂದು ದೂರಿದರು. ಚುನಾವಣಾ ಫಲಿತಾಂಶ ಹೊರಬಿದ್ದು 13 ದಿನಗಳೇ ಕಳೆದರೂ ಉಭಯ ಪಕ್ಷಗಳೊಳಗೆ ಖಾತೆ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಲಿಲ್ಲ. ಎರಡೂ ಪಕ್ಷಗಳು ಕೆಲವು ಖಾತೆಗಳಿಗೆ ಪಟ್ಟು ಹಿಡಿದಿರುವ ಕಾರಣ ಆಯ್ಕಾ ವಿಚಾರವು ನನೆಗುದಿಗೆ ಬಿದ್ದಿದೆ.

ಉಭಯಪಕ್ಷಗಳು 1999ರಲ್ಲಿ ಖಾತೆ ಹಂಚಿಕೆಗೆ ಅನುಸರಿಸಿರುವ ಸಿದ್ಧಾಂತದಂತೆ ಮುಂದುವರಿಯಲು ಎನ್‌ಸಿಪಿ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಪಾಲರು ಉಸ್ತುವಾರಿ ಮುಖ್ಯಮಂತ್ರಿ ಅಶೋಕ್ ಚೌವಾಣ್ ಹಾಗೂ ಭುಜಬಲ್ ಅವರನ್ನು ಪ್ರತ್ಯೇಕ ಭೇಟಿಗಾಗಿ ಕರೆದಿದ್ದರು. ಭುಜಬಲ್ ಅವರ ಭೇಟಿಗೆ ಮುಂಚಿತವಾಗಿ ಅಶೋಕ್ ಚೌವಾಣ್ ರಾಜ್ಯಪಾಲರನ್ನು ಭೇಟಿಯಾಗಿದ್ದರು. 288 ಸ್ಥಾನದ ಮಹಾರಾಷ್ಟ್ರದ ವಿಧಾನ ಸಭೆಯಲ್ಲಿ ಕಾಂಗ್ರೆಸ್ 82 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಎನ್‌ಸಿಪಿ 62 ಸ್ಥಾನಗಳನ್ನು ಗಳಿಸಿಕೊಂಡಿದೆ.

ಕಳೆದ ಸರ್ಕಾರದಲ್ಲಿ ಎನ್‌ಸಿಪಿ ಹೊಂದಿದ್ದ ಗೃಹಖಾತೆಯು ತನಗೆ ಬೇಕು ಎಂಬುದಾಗಿ ಕಾಂಗ್ರೆಸ್ ಹಠಹಿಡಿದಿದ್ದರೆ, ಬಿಟ್ಟುಕೊಡಲಾರೆ ಎಂಬುದಾಗಿ ಎನ್‌ಸಿಪಿ ಪಟ್ಟುಹಿಡಿದೆ. ಗೃಹಖಾತೆಯಲ್ಲದೆ, ಕಾಂಗ್ರೆಸ್ ಇಂಧನ, ಹಣಕಾಸು ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಗಳೂ ತನಗೆ ಬೇಕು ಎನ್ನುತ್ತಿದೆ. ಮೊದಲಿಗೆ ಕಾಂಗ್ರೆಸ್ ಈ ನಾಲ್ಕೂ ಖಾತೆಗಳು ತನಗೆ ಬೇಕು ಎಂದು ಹೇಳಿದ್ದರೆ, ಕೊನೆಗೆ ಎರಡಾದರೂ ಸಿಕ್ಕಲೇ ಬೇಕು ಎಂದು ಹೇಳಿದೆ. ಇದಲ್ಲಗೆ ಸ್ಪೀಕರ್ ಖುರ್ಚಿಯ ಮೇಲೂ ಕಾಂಗ್ರೆಸ್ ಕಣ್ಣು ನೆಟ್ಟಿದೆ. 1999ರ ಖಾತೆಹಂಚಿಕೆ ಸಿದ್ಧಾಂತಕ್ಕೆ ಅಂಟಿಕೊಳ್ಳುವ ಸಾಧ್ಯತೆಯನ್ನೂ ಅದು ತಳ್ಳಿಹಾಕಿದೆ.

ಈ ಮಧ್ಯೆ, ಚುನಾವಣೆಯಲ್ಲಿ ಬಹುಮತಗಳಿಸಿರುವ ಮೈತ್ರಿ ಕೂಟವು ಸರ್ಕಾರ ರೂಪಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಶಿವಸೇನೆ-ಬಿಜೆಪಿ ಮೈತ್ರಿ ಕೂಟ ಒತ್ತಾಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ