ಪ್ರಧಾನಿ ಮನಮೋಹನ್ ಸಿಂಗ್ ಅವರು ಇಲ್ಲಿನ ಪ್ರಧಾನ ಆರೋಗ್ಯ ಸಂಶೋಧನಾ ಕೇಂದ್ರಕ್ಕೆ ಭೇಟಿನೀಡಿದ್ದವೇಳೆ ಏರ್ಪಡಿಸಲಾಗಿದ್ದ ಬಿಗಿ ಭದ್ರತಾ ವ್ಯವಸ್ಥೆಯಿಂದಾಗಿ ಸೂಕ್ತಕಾಲದಲ್ಲಿ ಚಿಕಿತ್ಸೆ ಲಭಿಸದೆ ವ್ಯಕ್ತಿಯೊಬ್ಬ ಅಸುನೀಗಬೇಕಾಯಿತು ಎಂಬುದಾಗಿ ಆತನ ಕುಟುಂಬಿಕರು ಆಪಾದಿಸಿದ್ದಾರೆ.
ಅನಾರೋಗ್ಯ ಪೀಡಿತನಾಗಿದ್ದ ಸುಮಿತ್ ಪ್ರಕಾಶ್ ವರ್ಮಾ(32) ಅವರನ್ನು ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಭದ್ರತಾ ಕಾರಣದಿಂದ ವಾಹನಕ್ಕೆ ತುರ್ತುಘಟಕದತ್ತ ಪ್ರವೇಶಿಸಲು ಆಗದ ಕಾರಣ ಆತ ವಾಹನದಲ್ಲೇ ಸಾವನ್ನಪ್ಪಬೇಕಾಯಿತು ಎನ್ನಲಾಗಿದೆ. ಏತನ್ಮಧ್ಯೆ, ಈ ಘಟನೆಯ ಕುರಿತು ತನಿಖೆಗೆ ಪ್ರಧಾನಿ ಆದೇಶ ನೀಡಿದ್ದಾರೆ.
ವರ್ಮಾರನ್ನು 45 ಕಿಲೋಮೀಟರ್ ದೂರದ ಅಂಬಾಲದಿಂದ ಕರೆತರಲಾಗಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ (ಪಿಜಿಐಎಂಇಆರ್) ವಿವಿಧ ಗೇಟ್‌ಗಳಲ್ಲಿ ತಡೆತಡೆದು ತಪಾಸಣೆಗೊಳಪಡಿಸಿದ ಕಾರಣ ನಿರ್ಣಾಯಕ ಸಮಯ ವ್ಯರ್ಥವಾಗಿದ್ದು, ಇದೇ ಆತನ ಸಾವಿಗೆ ಕಾರಣವಾಯಿತು ಎಂದು ಮೃತರ ಸಂಬಂಧಿ ರಿಚಾ ವರ್ಮಾ ಎಂಬವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವರ್ಮಾ ಅವರು ಕಿಡ್ನಿ ಹಾಗೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಅವರು ತನ್ನ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಸ್ನಾತಕೋತ್ತರ ಸಂಸ್ಥೆಯ 44ನೆ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಮನಮೋಹನ್ ಸಿಂಗ್ ಇಲ್ಲಿಗೆ ಮಂಗಳವಾರ ಮುಂಜಾನೆ ಆಗಮಿಸಿದ್ದಾರೆ.