ಬಾಬ್ರಿ ಮಸೀದಿ ಧ್ವಂಸ ಧಾರ್ಮಿಕ ಅಂಧಾಭಿಮಾನ ಮತ್ತು ಪೂರ್ವಾಗ್ರಹಪೀಡಿತ ಕೃತ್ಯ ಎಂದು ಗೃಹ ಸಚಿವ ಪಿ.ಚಿದಂಬರಂ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ಕೋಮುವಾದವೂ ಖಂಡನೀಯ. ಅಲ್ಪಸಂಖ್ಯಾತರನ್ನು ರಕ್ಷಿಸುವ ಕರ್ತವ್ಯ ಬಹುಸಂಖ್ಯಾತರ ಮೇಲಿದೆ ಎಂದು ಹೇಳಿದ್ದಾರೆ.
ಮಂಗಳವಾರ ಜಮಾತ್ ಉಲೇಮಾ ಐ ಹಿಂದ್‌ನ 30ನೇ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಧರ್ಮದ ಹೆಸರಲ್ಲಿ ಹಿಂಸಾ ಹಾದಿ ತುಳಿಯುವುದನ್ನು ಖಂಡಿಸಲೇಬೇಕಾಗುತ್ತದೆ ಎಂದರು.
ಜಮಾತ್ ಉಲೇಮಾ ಸಂಘಟನೆಯು ಭಯೋತ್ಪಾದನೆ ವಿರುದ್ಧ ಕಳೆದ ವರ್ಷ ಹೊರಡಿಸಿದ ಫತ್ವಾವನ್ನು ಪ್ರಶಂಸಿಸಿದ ಅವರು, ಮುಸ್ಲಿಮರು ಮಾತ್ರವಲ್ಲ, ಸಮರ್ಪಕವಾಗಿ ಚಿಂತನೆ ನಡೆಸುವ ಜನರೆಲ್ಲರೂ ಈ ನಿಷೇಧವನ್ನು ಪಾಲಿಸಬೇಕು ಎಂದು ತಿಳಿಸಿದರು.
ಅಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವ ಹೊಣೆಗಾರಿಕೆ ಬಹುಸಂಖ್ಯಾತರ ಮೇಲಿದೆ. ಜಗತ್ತಿನ ಎಲ್ಲೆಡೆಯಲ್ಲೂ ಇದು ಅನ್ವಯವಾಗುತ್ತದೆ. ಶ್ರೀಲಂಕಾದಲ್ಲಿ ತಮಿಳರು, ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಗಳನ್ನೆಲ್ಲ ಅಲ್ಲಿನ ಬಹುಸಂಖ್ಯಾತ ಸಮುದಾಯದವರೇ ರಕ್ಷಿಸಬೇಕು. ಕಾಶ್ಮೀರದಲ್ಲಿ ಮುಸ್ಲಿಮರು ಮತ್ತು ಪಂಜಾಬ್‌ನಲ್ಲಿ ಸಿಖ್ಬರು ಬಹುಸಂಖ್ಯಾತರಿದ್ದು, ಅಲ್ಲಿ ಅವರು ಇತರ ಧರ್ಮದವರನ್ನು ರಕ್ಷಿಸುವ ಕೆಲಸವನ್ನು ಮಾಡಬೇಕು. ದೇಶದೆಲ್ಲೆಡೆ ಇಂತಹ ವ್ಯವಸ್ಥೆ ಇದ್ದರೆ ಯಾರಿಗೂ ಅಭದ್ರತೆಯ ಭಾವನೆ ಮೂಡುವುದು ಸಾಧ್ಯವಿಲ್ಲ ಎಂದರು.