ಶಾಲಾ ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿದ್ದ ನಾಡ ದೋಣಿಯೊಂದು ಕೆರೆಯಲ್ಲಿ ಮಗುಚಿಕೊಂಡು 8 ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸತ್ತಿರುವ ದಾರುಣ ಘಟನೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ಸಂಭವಿಸಿದೆ. ಸುಮಾರು 40 ಮಕ್ಕಳು ದೋಣಿಯಲ್ಲಿ ಕುಳಿತಿದ್ದು, ಶಾಲೆಯಿಂದ ಮನೆಗೆ ದೋಣಿಯಲ್ಲಿ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ.
ಇದುವರೆಗೆ ಎಷ್ಟು ಮಂದಿ ವಿದ್ಯಾರ್ಥಿಗಳ ಜೀವವುಳಿಸಲಾಗಿದೆಯೆಂಬ ಬಗ್ಗೆ ವಿವರಗಳು ಲಭ್ಯವಿಲ್ಲ. ಮಧ್ಯಾಹ್ನ ಮೂರುವರೆಗೆ ಈ ದುರ್ಘಟನೆ ಸಂಭವಿಸಿದ್ದು, ದೋಣಿ ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು, ರಕ್ಷಣಾ ತಂಡ ಮತ್ತು ಮೀನುಗಾರರು ಸ್ಥಳಕ್ಕೆ ಧಾವಿಸಿ ಅನೇಕ ಮಂದಿ ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆಯೆಂದು ವರದಿಯಾಗಿದೆ.
ಕಳೆದ ಸೆಪ್ಟೆಂಬರ್ 30ರಂದು ತೇಕಡಿ ಸರೋವರದಲ್ಲಿ ದೋಣಿಯೊಂದು ಮಗುಚಿಕೊಂಡು ಅದರಲ್ಲಿದ್ದ 40 ಪ್ರವಾಸಿಗಳು ಅಸುನೀಗಿದ್ದರು. ಈ ಘಟನೆ ಜನರ ನೆನಪಿನಿಂದ ಮಾಸುವ ಮುನ್ನವೇ ಇನ್ನೊಂದು ದುರಂತ ಸಂಭವಿಸಿದೆ. ತೇಕಡಿ ಪ್ರಕರಣದಲ್ಲಿ ಮೂಲ ಸುಕಕ್ಷತೆ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. ಪ್ರವಾಸಿಗಳು ಜೀವರಕ್ಷಕ ಉಡುಪುಗಳನ್ನು ಧರಿಸಿರಲಿಲ್ಲ. ಘಟನೆಯ ಬಳಿಕ ದೋಣಿಯಲ್ಲಿ ಯಾಂತ್ರಿಕ ದೋಷಗಳಿಂದ ಕೂಡಿತ್ತೆಂದು ಪತ್ತೆಯಾಗಿತ್ತು.