ಚಂಡೀಗಢದ ವೈದ್ಯಕೀಯ ಸಂಶೋಧನಾ ಮತ್ತು ಸ್ನಾತಕೋತ್ತರ ಕೇಂದ್ರದ (ಪಿಜಿಐಎಂಇಆರ್) ಘಟಿಕೋತ್ಸವ ಸಂದರ್ಭದಲ್ಲಿ ಮಂಗಳವಾರ ತಾನು ಭೇಟಿ ನೀಡಿದ ವೇಳೆ ಭದ್ರತೆಯ ಕಾರಣದಿಂದ ಕಾರನ್ನು ಅಲ್ಲಲ್ಲಿ ತಡೆದು ನಿಲ್ಲಿಸಿದ ಕಾರಣ ಸಕಾಲಕ್ಕೆ ಚಿಕಿತ್ಸೆ ಲಭಿಸದೆ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆಗೆ ಪ್ರಧಾನಿ ಡಾ. ಮನಮೋಹನ ಸಿಂಗ್ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಸುಮಿತ್ ವರ್ಮಾ(32) ಎಂಬವವರು ಸಾವನ್ನಪ್ಪಿದ್ದರು. ವರ್ಮಾ ಅವರ ಪತ್ನಿಗೆ ಬರೆದ ಪತ್ರ ಬರೆದಿರುವ ಪ್ರಧಾನಿ ಸಿಂಗ್, "ನಿಮ್ಮ ಪತಿಯ ಸಾವಿನಿಂದ ನನಗೆ ತೀವ್ರ ದುಃಖವುಂಟಾಗಿದೆ" ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. ಪತ್ರದೊಂದಿಗೆ ಎರಡು ಲಕ್ಷ ರೂಪಾಯಿ ಪರಿಹಾರ ಚೆಕ್ ಅನ್ನೂ ರವಾನಿಸಿದ್ದಾರೆ.
"ನಾನು ಆಸ್ಪತ್ರೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿಯೇ ನಿಮ್ಮ ಪತಿ ಕೂಡಾ ಆಸ್ಪತ್ರೆ ಒಳಗೆ ಪ್ರವೇಶಿಸಬೇಕಾಗಿತ್ತು. ಆದರೆ ಭದ್ರತೆಯ ಕಾರಣದಲ್ಲಿ ಅವರು ಒಳಬರಲು ಸಾಧ್ಯವಾಗದೆ ಮತ್ತು ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಬೇಕಾಗಿ ಬಂದದ್ದು ನನ್ನೊಳಗೆ ತೀವ್ರ ವಿಷಾದ ಉಂಟುಮಾಡಿದೆ" ಎಂದು ವಿವರಿಸಿದ್ದಾರೆ.
ಪ್ರಧಾನಿ ಭೇಟಿಯ ದಿನದಂದು ತೀವ್ರ ಭದ್ರತಾ ವ್ಯವಸ್ಥೆ ಏರ್ಪಡಿಸಿದ್ದ ಆಸ್ಪತ್ರೆಯಲ್ಲಿ ಎರಡು ಗಂಟೆಗಳ ವಿಳಂಬದ ಬಳಿಕ ವರ್ಮಾರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕೊಂಡೊಯ್ಯಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಭದ್ರತಾ ನೆಪದಿಂದ ಹಲವು ಗೇಟುಗಳಲ್ಲಿ ತಮ್ಮನ್ನು ತಡೆದು ನಿಲ್ಲಿಸಿದ್ದೇ ಸಾವಿಗೆ ಕಾರಣ ಎಂದು ವರ್ಮಾ ಕುಟುಂಬ ಆರೋಪಿಸಿತ್ತು. ನಿರ್ಣಾಯಕ ಸಮಯದಲ್ಲಿ ಚಿಕಿತ್ಸೆ ಲಭಿಸುತ್ತಿದ್ದರೆ ಫಲಕಾರಿಯಾಗುತ್ತಿತ್ತು ಎಂದು ಕುಟುಂಬ ಹೇಳಿದೆ.