ಕಳೆದ ನವೆಂಬರ್‌ನಲ್ಲಿ ಮುಂಬೈ ಮೇಲೆ ಮಾರಣಾಂತಿಕ ನರಹಂತಕ ದಾಳಿ ನಡೆಸಿರುವ ಉಗ್ರರೊಂದಿಗೆ ನಿರಂತರ ದೂರವಾಣಿ ಸಂಪರ್ಕ ಇರಿಸಿಕೊಂಡಿದ್ದ ಫಿತೂರಿಕೋರರು ಅವರಿಗೆ ಸ್ಥೈರ್ಯ ತುಂಬಿದ್ದರು. ನಾರಿಮನ್ ಹೌಸ್‌ನಲ್ಲಿ ಎರಡು ದಿನಗಳ ಕಾಲ ಶಸಸ್ತ್ರ ಪಡೆಗಳೊಂದಿಗೆ ಕಾದಾಟ ನಡೆಸಿದ್ದ ದಾಳಿಕೋರರಲ್ಲಿ ಒಬ್ಬಾತ ತೀವ್ರ ಬಳಲಿದ್ದು ಒತ್ತಡಕ್ಕೆ ಸಿಲುಕಿದ್ದ.
ದಾಳಿಯ ವೇಳೆ ಉಗ್ರರು ಫಿತೂರಿಕೋರರೊಂದಿಗೆ ನಡೆಸಿದ್ದ ದೂರವಾಣಿ ಮಾತುಕತೆಯ ಸಿ.ಡಿಯನ್ನು ಬುಧವಾರ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಈ ವೇಳೆ ಸಂಭಾಷಣೆಯ ವಿಚಾರ ಹೊರಬಿದ್ದಿದೆ.
ಸಂಭಾಷಣೆಯೊಂದರಲ್ಲಿ ಉಗ್ರ ಬಾಬರ್ ಇಮ್ರಾನ್ ತನ್ನ ಪಾಕಿಸ್ತಾನಿ ಮಾಸ್ಟರ್‌ನೊಂದಿಗೆ ಮಾತುಕತೆ ನಡೆಸಿದ್ದು, ಆತನ ಸಹಚರ ಉಮರ್ ತೀವ್ರ ಒತ್ತಡದಿಂದ ಬಳಲಿದ್ದು ಉದ್ವೇಗಕಾರಿ ಕ್ಷಣಗಳನ್ನು ಎದುರಿಸುತ್ತಿದ್ದಾನೆ. ಹಾಗಾಗಿ ಆತನನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿರುವುದಾಗಿ ತಿಳಿಸಿದ್ದ.
ಫೋನ್ ಉಮರ್‌ಗೆ ಕೊಡು ಎಂದು ಹೇಳಿದ ಸಂಚುಕೋರ ಗುಂಡಿನ ಕಾದಾಟ ನಡೆಸುವಂತೆ ಆತನನ್ನು ಪ್ರೇರೇಪಿಸಿದ್ದ. ನಮಾಜ್ ಮಾಡಿದ್ದಿಯಾ, ಗುರಿಗಳತ್ತ ಗುಂಡು ಹಾರಿಸಿದ್ದಿಯಾ ಎಂದು ವಿಚಾರಿಸಿದ್ದ. ಇದಲ್ಲದೆ ಸಿಂಹದಂತೆ ಹೋರಾಡಿ ಎಂಬುದಾಗಿ ಉತ್ಸಾಹ ತುಂಬಿದ್ದ. ಸಶಸ್ತ್ರಪಡೆಗಳ ಚಲನವಲನಗಳನ್ನು ನೋಡಿ ಗುಂಡು ಹಾರಿಸಿ ಎಂದು ಹೇಳಿದ್ದ. ದೂರವಾಣಿಯಲ್ಲಿ ಇದನ್ನು ಆಲಿಸಿದ್ದ ಉಮರ್ ತಾನು ಸೂಚನೆಗಳನ್ನು ಪಾಲಿಸುವುದಾಗಿ ಭರವಸೆ ನೀಡಿದ್ದ.
ನೀವು ಒತ್ತೆಯಾಳುಗಳನ್ನು ಕೊಂದಿದ್ದೀರಾ ಎಂಬುದಾಗಿಯೂ ಸಂಚುಕೋರ ಕೇಳಿದ್ದ. ಇದಕ್ಕೆ ಉತ್ತರಿಸಿದ್ದ ಇಮ್ರಾನ್ ತಾನು ನಿಮ್ಮ ಕರೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದ. ನೀವು ಒತ್ತೆಯಾಳುಗಳನ್ನು ಕೊಲ್ಲಲು ಮುಕ್ತರು ಎಂಬುದಾಗಿ ಹೇಳಿದ ತಕ್ಷಣ ಇತ್ತಲಿನಿಂದ ಗುಂಡು ಹಾರಿಸಲಾಗಿದ್ದು, ಗುಂಡಿನ ಸದ್ದೂ ಸಹ ಸಂಭಾಷಣೆ ಮಧ್ಯೆ ದಾಖಲಾಗಿದೆ.
ಒಬ್ಬ ಒತ್ತೆಯಾಳನ್ನು ಕೊಂದಿದ್ದೀರಾ ಇಲ್ಲ, ಇಬ್ಬರು ಒತ್ತೆಯಾಳನ್ನು ಕೊಂದಿದ್ದಿಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, ತಾನು ಒಬ್ಬನನ್ನು ಹಾಗೂ ಇನ್ನೊಬ್ಬನನ್ನು ಉಮರ್ ಕೊಂದನೆಂದು ಉತ್ತರಿಸಿದ್ದ.