ವಂದೇ ಮಾತರಂ ಇಸ್ಲಾಮ್ ವಿರೋಧಿಯಲ್ಲ: ಸಂಘಟನೆಗಳು

ಎ.ಆರ್. ರೆಹ್ಮಾನ್‌ರನ್ನು ವಿರೋಧಿಸಿಲ್ಲ ಯಾಕೆ?
ಭೋಪಾಲ, ಗುರುವಾರ, 5 ನವೆಂಬರ್ 2009( 17:40 IST )
ವಂದೇ ಮಾತರಂ ಹಾಡುವುದು ಇಸ್ಲಾಮಿಕ್ ವಿರೋಧಿಯಲ್ಲ ಎಂಬುದಾಗಿ ಮಧ್ಯಪ್ರದೇಶದ ಎರಡು ಪ್ರಮುಖ ಮುಸ್ಲಿಂ ಸಂಘಟನೆಗಳು ಹೇಳುವ ಮೂಲಕ ಈ ಕುರಿತು ಇಸ್ಲಾಮಿಕ್ ಸಂಘಟನೆಗಳ ನಡುವೆ ಪರಸ್ಪರ ವಿರುದ್ಧ ಅಭಿಪ್ರಾಯಗಳು ಹೊರಬಿದ್ದಂತಾಗಿದೆ. ಈ ದೇಶಭಕ್ತಿ ಗೀತೆಯ ವಿರುದ್ಧ ಜಮಾತ್ ಉಲೇಮಾ-ಐ-ಹಿಂದ್‌ನ ಧರ್ಮಗುರುಗಳ ಮಂಡಳಿಯು ಫತ್ವಾ ಹೊರಡಿಸುವ ಮಸೂದೆಯೊಂದನ್ನು ಅಂಗೀಕರಿಸಿತ್ತು.
ಈ ಹಾಡನ್ನು ಉರ್ದುವಿಗೆ ತರ್ಜಮೆ ಮಾಡಿರುವುದಾಗಿ ಹೇಳಿರುವ ಅಖಿಲ ಭಾರತೀಯ ಮುಸ್ಲಿಂ ತೆಹ್ವಾರ್ ಸಮಿತಿ(ಎಐಎಂಟಿಸಿ) ಮತ್ತು ಭಾರತದ ರಾಷ್ಟ್ರೀಯ ಜಾತ್ಯತೀತ ರಂಗವು ಇದು ರಾಷ್ಟ್ರವನ್ನು ಸುರಕ್ಷವಾಗಿಸುವ ಪ್ರಾರ್ಥನೆ ಅಷ್ಟೆ ಎಂದು ಹೇಳಿವೆ.
"ಇದು ಇಸ್ಲಾಮ್ ವಿರೋಧಿಯಲ್ಲ. ಇದರಿಂದಾಗೇ ಹಲವಾರು ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು ವಂದೇಮಾತರಂ ಹೇಳುತ್ತಲೇ ತಮ್ಮ ಕೊನೆಯುಸಿರೆಳೆದಿದ್ದಾರೆ" ಎಂಬುದಾಗಿ ಎಐಎಂಟಿಸಿಯ ಅಧ್ಯಕ್ಷ ಒಸಫ್ ಶಹ್ಮೀರಿ ಖುರ್ರಮ್ ಹೇಳಿದ್ದಾರೆ.
"ವಂದೇಮಾತರಂ ತಾಯಿ ದೇವರಿಗೆ ಸಲ್ಲಿಸುವ ಪ್ರಾರ್ಥನೆಯಲ್ಲ. ಇದು ರಾಷ್ಟ್ರವನ್ನು ಸುರಕ್ಷಿತವಾಗಿಸಲು ಸಲ್ಲಿಸುವ ಪ್ರಾರ್ಥನೆಯಾಗಿದೆ. ಹಾಗಾಗಿ ಇದನ್ನು ಪಠಿಸುವುದರಿಂದ ಅಥವಾ ಹಾಡುವುದರಿಂದ ಸಮಸ್ಯೆಯೇನೂ ಇಲ್ಲ" ಎಂದು ಅವರು ಹೇಳಿದ್ದಾರೆ.
ಜಮಾತೆ ಐ ಹಿಂದ್‌ನ ಮುಖ್ಯಸ್ಥ ಮೆಹ್ಮೂದ್ ಮದನಿ ಅವರ ತಾತ ಮೌಲಾನ ಹುಸೇನ್ ಅಹ್ಮದ್ ಮದನಿ ಮತ್ತು ಅವರ ತಂದೆ ಕಾಂಗ್ರೆಸ್ ಸಂಸದರಾಗಿದ್ದ ಅಸದ್ ಮದನಿ ಅವರುಗಳೂ ವಂದೇ ಮಾತರಂ ಅನ್ನು ಹಲವು ಸಂದರ್ಭಗಳಲ್ಲಿ ಹಾಡಿದ್ದಾರೆ ಎಂದು ಅವರು ನೆನಪಿಸಿದ್ದಾರೆ.
ಇದು ಇಸ್ಲಾಮಿಕ್ ವಿರೋಧಿ ಎಂದಾಗಿರುತ್ತಿದ್ದರೆ, ಮೌಲಾನಾ ಹುಸೇನ್ ಅಹ್ಮದ್ ಮದನಿ, ಮೌಲಾನ ಹಸ್ರತ್ ಮೊಹಾನಿ, ಮೌಲಾನಾ ಒಬೆದುಲ್ಲಾ ಸಿಂಧಿ, ಅಶ್ಫಕುಲ್ಲಾ ಅವರುಗಳು ವಂದೇ ಮಾತರಂ ಹಾಡುತ್ತಲೇ ತಮ್ಮ ಕೊನೆಯುಸಿರೆಳೆಯುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಿಸಿದರು.
ತಮ್ಮ ಸಂಘಟನೆಯಲ್ಲಿ ದೇಶಾದ್ಯಂತ 3,50,000 ಸದಸ್ಯರಿದ್ದಾರೆ ಮತ್ತು 610 ಶಾಖೆಗಳಿವೆ ಎಂದು ಹೇಳಿದ ಅವರು ವಂದೇ ಮಾತರಂ ವಿರುದ್ಧ ಫತ್ವಾ ಹೊರಡಿಸಿರುವ ಜಮಾತ್ ಉಲೇಮಾ ಐ ಹಿಂದ್ ಮತ್ತು ದಿಯೋಬಂದ್‌ನಲ್ಲಿರುವ ದಾರುಲ್ ಉಲ್ ಉಲೂಮ್‌ಗಳು ವಾಸ್ತವಾಂಶಗಳ ಕುರಿತು ಅಜ್ಞಾನ ಹೊಂದಿವೆ ಎಂದು ನುಡಿದರು.
ಎನ್ಎಸ್ಎಫ್ಐ ಅಧ್ಯಕ್ಷ ಇರ್ಶಾದ್ ಅಲಿ ಖಾನ್ ಅಫ್ರಿದಿ ಅವರೂ ಸಹ ವಂದೇ ಮಾತರಂ ಇಸ್ಲಾಂ ವಿರೋಧಿ ಅಲ್ಲ ಎಂದು ಹೇಳಿದ್ದಾರೆ. ಇಂತಹ ದಿಕ್ತತ್‌ಗಳನ್ನು ನೀಡುವ ವ್ಯಕ್ತಿಗಳು ಅದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿರುವ ಕಾರಣ ಇಂತಹ ವಿವಾದಗಳು ಹುಟ್ಟಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.
ಎ.ಆರ್. ರೆಹ್ಮಾನ್‌ರನ್ನು ವಿರೋಧಿಸಿಲ್ಲ ಯಾಕೆ?
ಹಾಗಾದರೆ ಸಂಗೀತ ನಿರ್ದೇಶ ಎ.ಆರ್. ರೆಹ್ಮಾನ್ ಇದನ್ನು ಹಾಡಿದಾಗ ಯಾರೂ ಯಾಕೆ ವಿರೋಧಿಸಿಲ್ಲ ಎಂದು ಪ್ರಶ್ನಿಸಿದ ಅವರು ಈ ಹಾು ಭಾರೀ ಜನಪ್ರಿಯವಾಗಿತ್ತು ಮಾತ್ರವಲ್ಲದೆ, ಅವರನ್ನು ಹೊಸ ಎತ್ತರಕ್ಕೆ ಏರಿಸಿತ್ತು ಎಂದು ಅವರು ನುಡಿದರು.