ರಾಷ್ಟ್ರದಲ್ಲಿ ಹಬ್ಬಿರುವ ಮಹಾಮಾರಿ ಹಂದಿಜ್ವರದಿಂದಾಗಿ, ವಿದೇಶಿಗರ ಅಗಮನ ಕುಗ್ಗಿದೆಯಲ್ಲದೆ, ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದ ಪ್ರವಾಸಿಗಳ ಸಂಖ್ಯೆ 4,48,493 ಆಗಿದ್ದರೆ, ಕಳೆದ ವರ್ಷ ಇದೇ ವೇಳೆ 4,52,566 ಮಂದಿ ಭೇಟಿ ನೀಡಿದ್ದರು. ಈ ಅಂಕಿಅಂಶಗಳು ಶೇ.0.9 ಕುಸಿತವನ್ನು ಕಂಡಿದೆ. ಕಳೆದ ವರ್ಷ ಜನವರಿಯಿಂದ ಅಕ್ಟೋಬರ್ ತನಕ ರಾಷ್ಟ್ರಕ್ಕೆ ಭೇಟಿ ನೀಡಿರುವ ಪ್ರವಾಸಿಗಳ ಒಟ್ಟು ಸಂಖ್ಯೆ 43,23,729 ಆಗಿದ್ದರೆ, ಈ ವರ್ಷ ಜನವರಿಯಿಂದ ಅಕ್ಟೋಬರ್ ತನಕದ ಪ್ರವಾಸಿಗಳ ಸಂಖ್ಯೆ 40,23,088 ಆಗಿದೆ.
ಹಂದಿ ಜ್ವರದ ಭೀತಿಯಿಂದ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಹೇಳಿರುವ ಪ್ರವಾಸೋದ್ಯಮ ಸಚಿವೆ ಕುಮಾರಿ ಸೆಲ್ಜಾ ಅವರು, ಆದರೂ, ವಿದೇಶಿ ವಿನಿಮಯ ಗಳಿಕೆ ಇತ್ತೀಚಿನ ದಿನಗಳಲ್ಲಿ ಏರುತ್ತಿದೆ ಎಂದು ತಿಳಿಸಿದ್ದಾರೆ.
ಪುಣೆಯಲ್ಲಿ 100ನೆ ಬಲಿ ಈ ಮಧ್ಯೆ ಹಂದಿಜ್ವರದ ಕೇಂದ್ರ ಬಿಂದು ಎಂಬುದಾಗೇ ಪರಿಗಣಿತವಾಗಿದ್ದ ಪುಣೆಯಲ್ಲಿ ಈ ಮಾರಿಗೆ ಬಲಿಯಾದವರ ಸಂಖ್ಯೆ 100ಕ್ಕೇರಿದೆ. 28ರ ಹರೆಯದ ಮೋಹಿನಿ ಅಂದ್ರೆ ಎಂಬವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.
ಆಗಸ್ಟ್ ಮೂರರಂದು ಶಾಲಾಬಾಲಕಿಯೊಬ್ಬಳು ಇಲ್ಲಿ ಸಾವನ್ನಪ್ಪುವ ಮೂಲಕ ರಾಷ್ಟ್ರದಲ್ಲಿ ಈ ರೋಗಕ್ಕೆ ಪ್ರಥಮ ಬಲಿಯಾಗಿದ್ದಳು. ಚಳಿಗಾಲದಲ್ಲಿ ಈ ರೋಗ ಮತ್ತಷ್ಟು ಉಲ್ಬಣಿಸಬಹುದೆಂಬ ಭೀತಿ ಇದ್ದು, ಆರೋಗ್ಯಾಧಿಕಾರಿಗಳು ಇದರ ತಡೆಗೆ ಪರಿಹಾರ ಕ್ರಮಗಳನ್ನು ಸಿದ್ಧಪಡಿಸುತ್ತಿದ್ದಾರೆ.