ಎಫ್‌ಬಿಐ ಬಲೆಗೆ ಬಿದ್ದಿರುವ ಲಷ್ಕರೆ ಕಾರ್ಯಕರ್ತರಾದ ಡೇವಿಡ್ ಹೆಡ್ಲೀ ಮತ್ತು ತಹವೂರ್ ರಾಣಾ ಅವರುಗಳ ಉಗ್ರಗಾಮಿ ಯೋಜನೆಗಳಿಗೂ ಪಾಕಿಸ್ತಾನಕ್ಕೂ ಸಂಪರ್ಕವಿದೆ ಎಂಬುದಾಗಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರು ದೃಢಪಡಿಸಿದ್ದಾರೆ.
ಈ ಇಬ್ಬರನ್ನು ಎಫ್‌ಬಿಐ ಅಮೆರಿಕದಲ್ಲಿ ಬಂಧಿಸಿತ್ತು. ಈ ಇಬ್ಬರು ಪಾಕಿಸ್ತಾನ ಮೂಲದ ಲಷ್ಕರೆ ಉಗ್ರಗಾಮಿ ಸಂಘಟನೆಯ ನೆರವಿನೊಂದಿಗೆ ಭಾರತದಲ್ಲಿ ಬೃಹತ್ ಉಗ್ರಗಾಮಿ ದಾಳಿ ನಡೆಸಲು ಯೋಜಿಸಿದ್ದರು ಎಂಬ ಅಂಶ ತನಿಖೆಯಿಂದ ವ್ಯಕ್ತವಾಗಿತ್ತು.
ನವದೆಹಲಿಯಲ್ಲಿರುವ ರಾಷ್ಟ್ರೀಯ ರಕ್ಷಣಾ ಕಾಲೇಜು ಹಾಗೂ ಉತ್ತರ ಪ್ರದೇಶ ಪ್ರಮುಖ ಎರಡು ವಸತಿಶಾಲೆಗಳ ಮೇಲೆ ಹಾಗೂ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿರುವ ಕೆಲವು ಪಂಚತಾರ ಹೋಟೇಲುಗಳ ಮೇಲೆ ಅವರು ದಾಳಿ ನಡೆಸಲು ಬಯಸಿದ್ದರು.
"ಲಷ್ಕರೆ ಉಗ್ರ ಹೆಡ್ಲೀಗೆ ನಿಶ್ಚಿತವಾಗಿಯೂ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ. ಆತ ಪಾಕಿಸ್ತಾನಕ್ಕೆ ಹಲವಾರು ಬಾರಿ ಭೇಟಿನೀಡಿದ್ದ" ಎಂಬುದಾಗಿ ಚಿದಂಬರಂ ಹೇಳುವ ಕುರಿತು ಈ ಕುರಿತು ಪ್ರಥಮವಾಗಿ ಅಧಿಕೃತ ಶಬ್ದ ಹೊರಬಿದ್ದಂತಾಗಿದೆ.
ಎಫ್‌ಬಿಐ ಸಲಹೆ ಮೇರೆಗೆ ಪಾಕಿಸ್ತಾನದ ಮತ್ತಿಬ್ಬರು ವ್ಯಕ್ತಿಗಳನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.