ಭಾರತವು ಪುನರಪಿ ವಿನಂತಿಗಳನ್ನು ಮಾಡುತ್ತಲೇ ಇದ್ದರೂ, ಪಾಕಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಶಿಬಿರಗಳು ಯಾವುದೇ ಎಗ್ಗಿಲ್ಲದೆ ಸಾಗಿದ್ದು, ಅವುಗಳಲ್ಲಿ ಹಲವಾರು ಶಿಬಿರಗಳು ಸೇನಾ ನೆಲೆಯ ಸಮೀಪವೇ ಇವೆ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಇಲ್ಲಿ ಶುಕ್ರವಾರ ಹೇಳಿದ್ದಾರೆ.
"ಪಾಕಿಸ್ತಾನದಿಂದ ಅನೇಕ ಉಗ್ರವಾದಿ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಇವುಗಳನ್ನು ಧ್ವಂಸಮಾಡುವಂತೆ ನಾವು ಪದೇಪದೇ ಮನವಿ ಮಾಡಿದರೂ ಇವುಗಳು ಯಾವುದೇ ತಡೆಇಲ್ಲದೆ ಮುಂದುವರಿದಿವೆ. ಇವುಗಳಲ್ಲಿ ಹಲವಾರು ಶಿಬಿರಗಳು ಸೇನಾನೆಲೆಗಳ ಸಮೀಪದಲ್ಲಿಯೇ ಇವೆ. ಇದು ಕಳವಳಕಾರಿ ವಿಚಾರವಾಗಿದ್ದು, ನಮ್ಮಲ್ಲಿ ಚಿಂತೆಯನ್ನು ಹುಟ್ಟುಹಾಕಿದೆ" ಎಂಬುದಾಗಿ ಆಂಟನಿ ಹೇಳಿದರು. ಅವರು ಇಲ್ಲಿ ಆಯೋಜಿಸಲಾಗಿದ್ದ ಸಮಾರಂಭ ಒಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಪಾಕಿಸ್ತಾನವು ಗಂಭೀರ ಹಾಗು ಮನಮುಟ್ಟುವಂತಹ ಪ್ರಯತ್ನ ಮಾಡದೇ ಇದ್ದರೆ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಲು ಸಾಧ್ಯವಿಲ್ಲ. ನಾವು ನಮ್ಮ ರಕ್ಷಣೆಯನ್ನು ತಗ್ಗಿಸಿಕೊಳ್ಳುವುದಿಲ್ಲ, ನಾವು ಸತತವಾಗಿ ಕಾವಲು ಕಾಯುತ್ತಿದ್ದು, ಏನಾದರೂ ಸಂಭವಿಸಿದರೆ ನಾವು ಇದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತೇವೆ" ಎಂದರು. ಒಂದೊಮ್ಮೆ ಮತ್ತೊಮ್ಮೆ ದಾಳಿಯುಂಟಾದರೆ, ಭಾರತದ ಪ್ರತಿಕ್ರಿಯೆ ಏನೆಂದು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ನಿರಂತರವಾದ ಭದ್ರತಾ ಬೆದರಿಕೆಯಿದ್ದು, ಅವರ ಪ್ರಯತ್ನಗಳನ್ನು ಸೋಲಿಸಲು ನಾವಿದ್ದೇವೆ ಎಂದು ಸಚಿವರು ನುಡಿದರು.