1984ರ ಸಿಖ್ ವಿರೋಧಿ ಗಲಭೆಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸದಿರುವುದನ್ನು ವಿರೋಧಿಸಿ ಗೃಹ ಸಚಿವ ಚಿದಂಬರಂ ಅವರು ಮೇಲೆ ಬೂಟೆಸೆದಿರುವ ಪತ್ರಕರ್ತ ಜಮೈಲ್ ಸಿಂಗ್‌ಗೆ ಕೆನಡಾದ ಸಿಖ್ ಸಮುದಾಯ 'ದೆಹಲಿ ಸಿಂಹ' ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಚಿದಂಬರಂ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಸಿಖ್ ಸಮುದಾಯದ ಪ್ರತಿಭಟನಾರ್ಥ ಜಮೈಲ್ ಈ ಕೃತ್ಯ ಎಸಗಿದ್ದರು.
‘ದೈನಿಕ ಜಾಗರಣ’ ಹಿಂದಿ ಪತ್ರಿಕೆಯ ನೌಕರನಾಗಿದ್ದ ಸಿಂಗ್, ಬೂಟೆಸೆತ ಘಟನೆಯ ನಂತರ ಕೆಲಸ ಕಳೆದುಕೊಂಡಿದ್ದರು. ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ‘ನಾನು ಆಪಾದಿತ’ ಎಂಬ ಪುಸ್ತಕ ಬರೆದಿರುವ ಜಮೈಲ್ ಇದೀಗ ಅದರ ಬಿಡುಗಡೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
"ಬೂಟೆಸತ ಘಟನೆಯ ನಂತರ ನನಗೆ ಅನೇಕ ಕಡೆಗಳಿಂದ ಕಾರ್ಯಕ್ರಮಗಳಿಗೆ ಆಮಂತ್ರಣ ಬರುತ್ತಿದೆ. ನನಗೆ ಯಾವುದೇ ರಾಜಕೀಯ ಪಕ್ಷ ಸೇರುವ ಬಯಕೆ ಇಲ್ಲ. ಸಿಖ್ ವಿರೊಧಿ ಗಲಭೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬುದಷ್ಟೆ ನನ್ನ ಉದ್ದೇಶ" ಎಂದು ಸಿಂಗ್ ಹೇಳಿದ್ದಾರೆ.
ಗೃಹ ಸಚಿವರತ್ತ ಬೂಟು ಎಸೆದಿದ್ದು ತಪ್ಪು. ಆದರೆ ನನ್ನ ಪ್ರತಿಭಟನೆಯ ವಿಚಾರ ಬಹಳ ಮುಖ್ಯವಾದುದು ಎಂದು ಅವರು ತನ್ನ ಬೂಟೆಸೆತ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.