ಮುಂಬೈದಾಳಿ ನಡೆಸಿರುವ ಉಗ್ರರಿಗೆ ಸಹಾಯ ಒದಗಿಸಿರುವ ಆಪಾದನೆ ಎದುರಿಸುತ್ತಿರುವ ಉಗ್ರ ಫಾಹಿಂ ಅನ್ಸಾರಿ, ತನಗೆ ನ್ಯಾಯಾಧೀಶರ ಮೇಲೆ ವಿಶ್ವಾಸವಿಲ್ಲದ ಕಾರಣ ಪ್ರಕರಣದ ಮರುವಿಚಾರಣೆ ನಡೆಸಬೇಕು ಎಂಬುದಾಗಿ ಬಾಂಬೆ ಹೈ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾನೆ.
ಫಾಹಿಂ ಜೈಲು ಅಧಿಕಾರಿಗಳ ಮೂಲಕ ಕಳುಹಿಸಿರುವ ಮನವಿಯನ್ನು ಆಲಿಸಿರುವ ನ್ಯಾಯಮೂರ್ತಿ ಜೆ.ಎನ್. ಪಟೇಲ್ ಹಾಗೂ ಅಮ್ಜದ್ ಸಯೀದ್ ಅವರನ್ನೊಳಗೊಂಡ ನ್ಯಾಯಪೀಠವು ಹೆಚ್ಚುವರಿ ಸರ್ಕಾರಿ ಅಭಿಯೋಜಕ ರಾಜೇಶ್ ಮೋರೆಯವರಿಗೆ ಎರಡು ದಿನಗಳೊಳಗಾಗಿ ಉತ್ತರ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಇದಲ್ಲದೆ, ಫಾಹಿಂ ಪರವಾಗಿ ವಾದಿಸಲು ಕಾನೂನು ಸಹಾಯ ಕೇಂದ್ರದಿಂದ ವಕೀಲರೊಬ್ಬರನ್ನು ನೇಮಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಪ್ರಸಕ್ತ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಎಂ.ಎಲ್. ತಹಲಿಯಾನಿ ಅವರು ಪ್ರಕರಣದ ಪ್ರಕ್ರಿಯೆಯನ್ನು ಸೂಕ್ತವಾಗಿ ದಾಖಲಿಸುತ್ತಿಲ್ಲ ಎಂಬುದಾಗಿ ಅತ ತನ್ನ ಮನವಿಯಲ್ಲಿ ದೂರಿದ್ದಾನೆ.
ಆಂಗ್ಲ ಭಾಷೆಯಲ್ಲಿ ಕೈಬರಹದಲ್ಲಿ ಸಲ್ಲಿಸಲಾಗಿರುವ ಈ ಮನವಿಯಲ್ಲಿ, ವಿಚಾರಣಾ ನ್ಯಾಯಾಧೀಶರನ್ನು ಬದಲಿಸಬೇಕು ಮತ್ತು ತನ್ನ ಮನವಿಯ ವಿಚಾರಣೆ ನಡೆದು ತೀರ್ಪು ನೀಡುವ ತನಕ ಪ್ರಕರಣದ ವಿಚಾರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಆತ ವಿನಂತಿಸಿದ್ದಾನೆ.
ಮುಂಬೈಯಲ್ಲಿ ಉಗ್ರರ ದಾಳಿಯ ನಕಾಶೆಗಳನ್ನು ಸಿದ್ಧಪಡಿಸಿರುವ ಮತ್ತು ಇದನ್ನು ಪಾಕಿಸ್ತಾನದಲ್ಲಿರುವ ಲಷ್ಕರೆ ಸಂಘಟನೆಗೆ ಸಹ ಆರೋಪಿ ಸಬಾವುದ್ದೀನ್ ಅಹ್ಮದ್ ಮೂಲಕ ಕಳುಹಿಸಿರುವ ಆಪಾದನೆ ಎದುರಿಸುತ್ತಿದ್ದಾನೆ.