ಯೋಗ ಗುರು ಬಾಬಾ ರಾಮದೇವ್ ಅವರ ಯೋಗ ಶಿಬಿರವು ವಂದೇ ಮಾತರಂನಿಂದ ಆರಂಭಗೊಳ್ಳುವ ಕಾರಣ ಮುಸ್ಲಿಮರು ಈ ಶಿಬಿರದಲ್ಲಿ ಭಾಗವಹಿಸಬಾರದು ಎಂಬುದಾಗಿ ಇಸ್ಲಾಮಿಕ್ ಸಂಸ್ಥೆಯಾಗಿರುವ ದಾರೂಲ್ ಉಲೂಮ್ ನಿರ್ದೇಶನ ನೀಡಿದೆ. ದಿಯೋಬಂದ್‌ನಲ್ಲಿ ನಡೆದ ಇಸ್ಲಾಮಿಕ್ ಸಮಾವೇಶದಲ್ಲಿ ರಾಮದೇವ್ ಅವರು ಪ್ರಾಣಾಯಾಮ ಪ್ರದರ್ಶಿಸಿ, ಹಿಂದೂ ಪುರೋಹಿತ ವೇದಮಂತ್ರವನ್ನು ಘೋಷಿಸಿರುವ ನಾಲ್ಕುದಿನಗಳ ಬಳಿಕ ಈ ನಿರ್ದೇಶನ ಹೊರಬಿದ್ದಿದೆ.
"ಮುಸ್ಲಿಮರು ಅಲ್ಲಾನನ್ನು ಹೊರತು ಪಡಿಸಿ ಇತರ ಯಾರಿಗೇ ಆದರೂ ಪ್ರಾರ್ಥನೆ ಸಲ್ಲಿಸಬಾರದು ಎಂಬುದಾಗಿ ಇಸ್ಲಾಮಿಕ್ ನಿಯಮಗಳು ಹೇಳುತ್ತಿದ್ದು, ವಂದೇ ಮಾತರಂ ಪ್ರಾರ್ಥನೆ ಹಾಡುವುದು ಇಸ್ಲಾಮ್ ವಿರೋಧಿ" ಎಂಬುದಾಗಿ ಮುಫ್ತಿ ಎಶಾನ್ ಕಾಜ್ಮಿ ಹೇಳಿದ್ದಾರೆ. ಇವರು ದಾರೂಲ್ ಉಲೂಮ್‌ನ ಫತ್ವಾ ಇಲಾಖೆಯ ಉಪ ಉಸ್ತುವಾರಿಯಾಗಿದ್ದಾರೆ.
ಅದಾಗ್ಯೂ, ಯೋಗವನ್ನು ಒಂದು ವ್ಯಾಯಾಮ ಎಂಬಂತೆ ಅಭ್ಯಸಿಸಬಹುದು ಎಂಬುದಾಗಿ ಅವರು ಹೇಳಿದ್ದಾರೆ. ಇತ್ತೀಚೆಗೆ ನಡೆದ ಜಮಾತೆ ಉಲೇಮಾ ಐ ಹಿಂದ್‌ನ 30ನೆ ಮಹಾಸಭೆಯಲ್ಲಿ ವಂದೇ ಮಾತರಂ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಕ್ಷಮೆಗೆ ಬಿಜೆಪಿ ಆಗ್ರಹ ಈ ಮಧ್ಯೆ, ವಂದೇ ಮಾತರಂ ವಿರುದ್ಧ ಫತ್ವಾ ಹೊರಡಿಸಿರುವ ಇಸ್ಲಾಮಿಕ್ ಸಮಾವೇಶದಲ್ಲಿ ಭಾಗವಹಿಸಿರುವ ಗೃಹ ಸಚಿವ ಪಿ. ಚಿದಂಬರಂ ಹಾಗೂ ಬಾಬಾ ರಾಮಾದೇವ್ ಅವರು ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂಬುದಾಗಿ ಬಿಜೆಪಿ ಒತ್ತಾಯಿಸಿದೆ.