ಕೊನೆಗೂ ಸಂಸತ್‌ನಲ್ಲಿ ಲಿಬರ್ಹಾನ್ ವರದಿ ಮಂಡನೆ

17ವರ್ಷಗಳ ದೀರ್ಘ ವಿಚಾರಣೆ ನಡೆಸಿದ ಪ್ರಕರಣ ಕೊನೆಗೂ ಬಹಿರಂಗ
ನವದೆಹಲಿ, ಮಂಗಳವಾರ, 24 ನವೆಂಬರ್ 2009( 12:22 IST )
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್ಹಾನ್ ಆಯೋಗದ ವರದಿಯನ್ನು ಕೊನೆಗೂ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದೆ. ಗೃಹ ಸಚಿವ ಪಿ.ಚಿದಂಬರಂ ಅವರು ಲೆಬರ್ಹಾನ್ ವರದಿಯನ್ನು ಅಧಿಕೃತವಾಗಿ ಮಂಡಿಸುವ ಮೂಲಕ ದೇಶಾದ್ಯಂತ ಕೋಮುದಳ್ಳುರಿಗೆ ಕಾರಣವಾಗಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನೈಜಾಂಶ ಹೊರಬಿದ್ದಂತಾಗಿದೆ.
ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ವಾಷಿಂಗ್ಟನ್ನಿನಿಂದ ಸೋಮವಾರ ರಾತ್ರಿ ಕರೆ ಮಾಡಿ, ಲಿಬರ್ಹಾನ್ ಆಯೋಗದ ವರದಿ ಸೋರಿಕೆಯಿಂದ ಪ್ರತಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸುವಂತೆ ಕೋರಿದ್ದರು. ಆ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಪ್ರಣಬ್ ಮುಖರ್ಜಿ ತುರ್ತು ಸಂಪುಟ ಸಭೆ ಕರೆದು, ಸಮಾಲೋಚನೆ ನಡೆಸಿದ ನಂತರ ಲೆಬರ್ಹಾನ್ ವರದಿ ಮಂಡಿಸಲು ನಿರ್ಧರಿಸಿದ್ದರು.
ಲಿಬರಾನ್ ಆಯೋಗದ ವರದಿ ಸೋರಿಕೆಯಾದ ಬಳಿಕ ಸಂಸತ್ತಿನಲ್ಲಿ ಬಿಜೆಪಿ ತೀವ್ರ ಗದ್ದಲ ಎಬ್ಬಿಸಿದ್ದರಿಂದ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗಿತ್ತು. ಲಿಬರ್ಹಾನ್ ವರದಿ ಬಿಡುಗಡೆಯಾಗುವ ಮುನ್ನವೇ ಮಾಧ್ಯಮಕ್ಕೆ ಸೋರಿಕೆಯಾದ ಬಗ್ಗೆ ಆಡ್ವಾಣಿ ಕೆಂಡಾಮಂಡಲವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರಣವ್ ಮುಖರ್ಜಿ ಅವರಿಗೆ ಅನುಮತಿ ನೀಡುವ ಮೂಲಕ ಬಾಬ್ರಿ ಮಸೀದಿ ವಿಷಯದಲ್ಲಿ ಉದ್ಭವಿಸಿದ ಹಾನಿಯನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿತ್ತು.
ಕೇಂದ್ರ ಸಚಿವ ಸಂಪುಟ ಮಂಗಳವಾರ ತುರ್ತು ಸಭೆಯೊಂದನ್ನು ನಡೆಸಿ, ಪ್ರಧಾನಿ ಗೈರುಹಾಜರಿನಲ್ಲಿ ಪ್ರಣವ್ ಮುಖರ್ಜಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಉನ್ನತ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಭಾರತೀಯ ಜನಶಕ್ತಿಯ ಮುಖ್ಯಸ್ಥೆ ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಅವರು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆಂದು ಲಿಬರಾನ್ ಆಯೋಗದ ವರದಿಯಲ್ಲಿ ಆರೋಪಿಸಲಾಗಿದೆ.
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಮುಖ್ಯ ತಪ್ಪಿತಸ್ಥರು ಎಂದು ಲಿಬರ್ಹಾನ್ ಆಯೋಗ ಉಲ್ಲೇಖಿಸಿದೆ.ಲಿಬರ್ಹಾನ್ ವರದಿಯಲ್ಲಿ ಸುಮಾರು 68 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಆಡ್ವಾಣಿ ಬಾಬ್ರಿ ಮಸೀದಿ ಕಟ್ಟಡದಿಂದ ಕೇವಲ 200 ಮೀಟರ್ ದೂರದಲ್ಲಿದ್ದರೆಂದೂ ವರದಿಯಾಗಿದೆ. ಬಾಬ್ರಿ ಮಸೀದಿ ಧ್ವಂಸಕ್ಕೆ ಕರಾರುವಕ್ಕಾಗಿ ಯೋಜಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.