ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೆ ಮುಜುಗರ ತಂದ ಸೆಕ್ಸ್ ಕಾಂಡ: ತಿವಾರಿ ರಾಜೀನಾಮೆ (Andhra Pradesh | Governor | N. D. Tiwari | Sex Scandal)
Bookmark and Share Feedback Print
 
PTI
ಮೂವರು ಯುವತಿಯರೊಂದಿಗೆ ರಾಸಲೀಲೆಯ ಭಂಗಿಯಲ್ಲಿದ್ದ ವೀಡಿಯೋ-ಚಿತ್ರಗಳು ಮಾಧ್ಯಮಗಳ ಕುಟುಕು ಕಾರ್ಯಾಚರಣೆಯಿಂದಾಗಿ ಭಾರೀ ಕೋಲಾಹಲ ಎಬ್ಬಿಸಿರುವಂತೆಯೇ ಆಂಧ್ರ ಪ್ರದೇಶ ರಾಜ್ಯಪಾಲ ನಾರಾಯಣ ದತ್ತ ತಿವಾರಿ ಅವರ ತಲೆದಂಡ ಅನಿವಾರ್ಯವಾದ ಹಿನ್ನೆಲೆಯಲ್ಲಿ ಅವರು ಶನಿವಾರ ಸಂಜೆ "ಅನಾರೋಗ್ಯ"ದ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ.

ಈ ಕುರಿತ ಆರೋಪಗಳನ್ನೆಲ್ಲಾ ರಾಜ್ಯಪಾಲರು ನಿರಾಕರಿಸಿದ್ದಾರೆ. ಆದರೆ ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರಕಾರವು ಶನಿವಾರ ರಾಜ್ಯ ಸರಕಾರದಿಂದ ವರದಿ ಕೇಳಿದೆ. ಇದು ಕಾಂಗ್ರೆಸ್ ಪಕ್ಷಕ್ಕೇ ತೀವ್ರ ಮುಜುಗರ ಉಂಟುಮಾಡಿರುವ ಪ್ರಸಂಗವಾಗಿತ್ತು ಮತ್ತು ಇದರಿಂದ ಕೇಂದ್ರ ಸರಕಾರ ತೀವ್ರ ಮುಜುಗರ ಅನುಭವಿಸಿತ್ತು.

ಎಬಿಎನ್-ಆಂಧ್ರ ಜ್ಯೋತಿ ಚಾನೆಲ್‌ನಲ್ಲಿ ಶುಕ್ರವಾರ ಈ ಸ್ಟಿಂಗ್ ಆಪರೇಶನ್ ವೀಡಿಯೋ ತುಣುಕುಗಳು ಪ್ರಸಾರವಾದ ಬಳಿಕ, ರಾಜಭವನವು ಆಂಧ್ರ ಹೈಕೋರ್ಟ್ ಮೊರೆ ಹೋಗಿ, ಚಾನೆಲ್‌ಗೆ ಇದನ್ನು ಪ್ರಸಾರ ಮಾಡದಂತೆ ತಡೆಯೊಡ್ಡಬೇಕೆಂದು ಕೋರಿ, ತಡೆಯಾಜ್ಞೆಯನ್ನೂ ತಂದಿತ್ತು.

ಆದರೆ, ಚಾನೆಲ್‌ನ ಪ್ರಧಾನ ಸಂಪಾದಕರಾದ ವೇಮೂರಿ ರಾಧಾಕೃಷ್ಣನ್ ಅವರು ಪ್ರತಿಕ್ರಿಯೆ ನೀಡಿ, ತಾವೇನು ತೋರಿಸಿದ್ದೇವೆಯೋ ಅದೆಲ್ಲಕ್ಕೂ ಸೂಕ್ತ ಸಾಕ್ಷ್ಯಾಧಾರಗಳಿವೆ. ತಾಕತ್ತಿದ್ದರೆ ಅವರು ಮಾನನಷ್ಟ ಮೊಕದ್ದಮೆ ಹೂಡಲಿ, ನಾವು ಎದುರಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿದ್ದಾರೆ.

ಇದೀಗ ಕೇಂದ್ರವು ರಾಜ್ಯ ಮುಖ್ಯ ಕಾರ್ಯದರ್ಶಿಯಲ್ಲಿ ಈ ಕುರಿತು ವರದಿ ಕೇಳಿದೆ. ತಿವಾರಿ ಅವರು ಕಟ್ಟಾ ಕಾಂಗ್ರೆಸಿಗರಾಗಿದ್ದು, ಉತ್ತರ ಪ್ರದೇಶ ಮತ್ತು ಆನಂತರ ರಚನೆಯಾಗಿದ್ದ ಉತ್ತರಾಖಂಡ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ತಮ್ಮ ಪಕ್ಷದ ಹಿರಿಯ ಮುಖಂಡರಾಗಿರುವುದರಿಂದಾಗಿ ಕಾಂಗ್ರೆಸ್‌ಗೆ ಈ ಲೈಂಗಿಕ ಹಗರಣದಿಂದಾಗಿ ತೀವ್ರ ಮುಜುಗರ ಉಂಟಾಗಿದ್ದು, ಇದಕ್ಕಾಗಿಯೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಇದೇ ತಿವಾರಿ ಅವರು ಭಿನ್ನಮತ ತೀವ್ರವಾದಾಗ ಆರೋಗ್ಯದ ಕಾರಣ ನೀಡಿಯೇ ಮಖ್ಯಮಂತ್ರಿ ಪದವಿಗೂ ರಾಜೀನಾಮೆ ನೀಡಿದ್ದರು.

ಇದೇ ಮೊದಲಲ್ಲ:
ಮಾಜಿ ಕೇಂದ್ರ ಸಚಿವರೂ ಆಗಿರುವ ತಿವಾರಿ ಅವರು ಈ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. ಸ್ತ್ರೀಲೋಲುಪ ಎಂದೇ ಈ ಹಿಂದೆಯೂ ಕರೆಸಿಕೊಳ್ಳುತ್ತಿದ್ದ ಅವರು, ಹಲವು ಪ್ರಕರಣಗಳಲ್ಲಿ ಸಿಲುಕಿದ್ದರು.

ಕೆಲವು ಸಮಯದ ಹಿಂದೆ, ದೆಹಲಿಯ ವಕೀಲ ರೋಹಿತ್ ಶೇಖರ್ ಎಂಬವರು ದೆಹಲಿ ಹೈಕೋರ್ಟಿನಲ್ಲಿ ತಿವಾರಿ ವಿರುದ್ಧ ಪಿತೃತ್ವ ಅರ್ಜಿಯೊಂದನ್ನು ಸಲ್ಲಿಸಿ, ತಾನು ತಮ್ಮ ತಾಯಿ ಉಜ್ವಲಾ ಶರ್ಮಾ ಮತ್ತು ತಿವಾರಿ ಅವರ ಅಕ್ರಮ ಸಂಬಂಧದಿಂದ ಜನಿಸಿರುವುದಾಗಿ ಹೇಳಿ ಕೋಲಾಹಲ ಎಬ್ಬಿಸಿದ್ದರು. ಈ ಆರೋಪವನ್ನೂ ತಿವಾರಿ ಅಲ್ಲಗಳೆದಿದ್ದರು. ಆದರೆ ಡಿಎನ್ಎ ಪರೀಕ್ಷೆಗೆ ಅವರು ನಿರಾಕರಿಸಿದ್ದರು.

ಆದರೆ ಅವರ ನೆರವಿಗೆ ಬಂದದ್ದು ನ್ಯಾಯಾಲಯ. ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು, ರೋಹಿತ್ ಅವರು ಪ್ರಾಪ್ತ ವಯಸ್ಕ ಆದ ಬಳಿಕ ಈ ಅರ್ಜಿಯನ್ನು ಸಲ್ಲಿಸಿದ್ದು, ಅವಧಿ ತೀರಿದ ಹಿನ್ನೆಯಲ್ಲಿ ಈ ಅರ್ಜಿಯನ್ನು ತಿರಸ್ಕರಿಸಿದ್ದರು.

ಇದಲ್ಲದೆ, ನೇಪಾಳಿ ಮಹಿಳೆ ಸಾರಿಕಾ ಪ್ರಧಾನ್ ಎಂಬಾಕೆಯೊಂದಿಗೆ ಕೂಡ ತಿವಾರಿಗೆ ಸಂಬಂಧ ಕಲ್ಪಿಸಲಾಗಿತ್ತು.

ಈ ಮಧ್ಯೆ, ತಿವಾರಿ ರಾಜೀನಾಮೆಯನ್ನು ಕಾಂಗ್ರೆಸ್ ಪಕ್ಷವು ಸ್ವಾಗತಿಸಿದೆ.

ಪೂರಕ ಸುದ್ದಿ: ರಾಜಭವನದಲ್ಲಿ ರಾಸಲೀಲೆ ಎಬ್ಬಿಸಿದ ಕೋಲಾಹಲ
ಸಂಬಂಧಿತ ಮಾಹಿತಿ ಹುಡುಕಿ