ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೋಮುಗಲಭೆಯಿಂದ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ: ಕೇಂದ್ರ (minorities | Central government | communal violence | P Chidambaram)
Bookmark and Share Feedback Print
 
ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸಲು ತಾನು ಬದ್ಧವಾಗಿದ್ದೇನೆ ಎಂದು ಉತ್ತರ ಪ್ರದೇಶದ ಬರೇಲಿ ಮತ್ತು ಆಂಧ್ರಪ್ರದೇಶದ ಹೈದರಾಬಾದ್‌ಗಳಲ್ಲಿನ ಕೋಮುಗಲಭೆಗಳ ಹಿನ್ನೆಲೆಯಲ್ಲಿ ಭರವಸೆ ನೀಡಿರುವ ಕೇಂದ್ರ ಸರಕಾರ, ವರ್ಷಾಂತ್ಯದೊಳಗೆ ನೂತನ ಕೋಮು ಹಿಂಸಾಚಾರ ತಡೆ ಕಾನೂನನ್ನು ಜಾರಿಗೆ ತರುವುದಾಗಿ ಹೇಳಿದೆ.

ಹಲವು ಕಡೆಗಳಲ್ಲಿ ಕೊಂಚ ಅವಕಾಶವಾದಿತನವೆನಿಸುವ ಕೋಮು ಹಿಂಸಾಚಾರಗಳು ನಡೆದಿರುವುದಕ್ಕೆ ದೇಶ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣಗಳು ಮತ್ತು ಮಾತಿನ ಚಕಮಕಿಗಳೇ ಹೆಚ್ಚಾಗಿ ಕೋಮು ಗಲಭೆಗಳಿಗೆ ಹೇತುವಾಗಿದ್ದು, ಆ ಮೂಲಕ ಅಲ್ಪಸಂಖ್ಯಾತ ಸಮುದಾಯದಲ್ಲಿ ಕ್ಷೋಭೆ, ಭೀತಿ ಮತ್ತು ಅಭದ್ರತೆಯುಂಟಾಗಿದೆ. ಇದರಿಂದ ಒಡಕು ಹೆಚ್ಚಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.

ಹಾಗಾಗಿ ಅಲ್ಪಸಂಖ್ಯಾತ ಸಮುದಾಯದ ಒಂದು ವರ್ಗದಲ್ಲಿನ ಶಂಕೆಯನ್ನು ದೂರ ಮಾಡುವ ಅಗತ್ಯವಿದ್ದು ಪಾಲನೆ, ರಕ್ಷಣೆ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿದು ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೂ ಸಮಾನ ಅವಕಾಶ ಸಿಗುವಂತೆ ಮಾಡಲು ಭಾರತ ಸರಕಾರವು ಬದ್ಧವಾಗಿದೆ ಎಂದು ನಾನು ಭರವಸೆ ನೀಡುತ್ತಿದ್ದೇನೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗಗಳ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಸಚಿವರು ಹೇಳಿದರು.

ಕೋಮು ಹಿಂಸಾಚಾರಗಳ ನಿಯಂತ್ರಣ ಮತ್ತು ಬಲಿಪಶುಗಳ ಪುನರ್ಜೀವನಕ್ಕೆ ಅವಕಾಶ ನೀಡುವ ನೂತನ ಕಾನೂನಿನ ಸಂಬಂಧ 2005ರ ಡಿಸೆಂಬರ್‌ನಲ್ಲಿ ಸಂಸದೀಯ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗಿದ್ದು, ಇದರ ಕುರಿತು ಕೇಂದ್ರ ಸರಕಾರವು ಕಾರ್ಯಪ್ರವೃತ್ತವಾಗಿದೆ. ಈ ವರ್ಷಾಂತ್ಯದೊಳಗೆ ಕಾನೂನು ಜಾರಿಯಾಗುವ ಭರವಸೆ ನಮ್ಮಲ್ಲಿದೆ ಎಂದೂ ಚಿದಂಬರಂ ತಿಳಿಸಿದ್ದಾರೆ.

ಸಾಚಾರ್ ಶಿಫಾರಸಿಗೆ ಬದ್ಧ...
ಇತರೆ ಹಿಂದುಳಿದ ವರ್ಗಗಳಲ್ಲಿರುವ ಮುಸ್ಲಿಮರಿಗೆ ಮೀಸಲಾತಿ ನೀಡುವ ಸಾಚಾರ್ ಸಮಿತಿ ವರದಿಯ ಶಿಫಾರಸಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ನಾವು ಬದ್ಧರಾಗಿದ್ದೇವೆ. ಇದನ್ನು ನಾವು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಿದ್ದೆವು ಎಂದರು.

ಹಿಂದುಳಿದ ವರ್ಗಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತ್ತು ವಿಶೇಷ ಪ್ರಾತಿನಿಧ್ಯ ನೀಡುವ ನಿಯಮವನ್ನು ನಾವು ಈಗಾಗಲೇ ತಮಿಳುನಾಡು, ಕೇರಳ ಮತ್ತು ಕರ್ನಾಟಕಗಳಲ್ಲಿ ಇದನ್ನು ಜಾರಿಗೊಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ಬಿಹಾರಕ್ಕೂ ವಿಸ್ತರಿಸಲಾಗುತ್ತದೆ. ಅದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಖುರ್ಷೀದ್ ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ