ಕೆಲಸಕ್ಕೆ ಹೋಗುವ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿಗೊಳಿಸಿರುವ ಭಾರತದ ಬೃಹತ್ ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಮ್ ದಿಯೋಬಂದ್, ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾದುದು ಎಂದು ಹೇಳಿದೆ.
ಪುರುಷರು ಮತ್ತು ಮಹಿಳೆಯರು ಜತೆಯಾಗಿ ಕೆಲಸ ಮಾಡುವ ಮತ್ತು ಮುಖ ಪರದೆಯಿಲ್ಲದೆ ಪುರುಷರ ಜತೆ ಮಾತನಾಡಲು ಅವಕಾಶ ಮಾಡಿಕೊಡುವ ಖಾಸಗಿ ಅಥವಾ ಸರಕಾರಿ ಕೆಲಸಗಳಲ್ಲಿ ಮುಸ್ಲಿಂ ಮಹಿಳೆಯರು ಕೆಲಸ ಮಾಡುವುದು ಕಾನೂನು ಬಾಹಿರ ಎಂದು ಈ ಫತ್ವಾ ತಿಳಿಸಿದೆ.
ಮುಸ್ಲಿಂ ಮಹಿಳೆ ಕಚೇರಿಯಲ್ಲಿರುವ ಸಂದರ್ಭದಲ್ಲಿ ಬುರ್ಖಾ ತೊಡುವುದು ಕಡ್ಡಾಯ ಮತ್ತು ಪುರುಷ ಸಹೋದ್ಯೋಗಿಗಳ ಜತೆ ಬೆರೆಯಬಾರದು ಎಂದು ಶರಿಯತ್ ಸ್ಪಷ್ಟವಾಗಿ ಹೇಳಿದೆ ಎಂದು ದಿಯೋಬಂದ್ ಧರ್ಮಗುರುಗಳು ಹೇಳಿದ್ದಾರೆ.
ಪಶ್ಚಾತ್ತಾಪ ಪಡಲಿದ್ದೀರಿ... ಈ ಫತ್ವಾವನ್ನು ಇತರ ಮುಸ್ಲಿಂ ಧಾರ್ಮಿಕ ಮುಖಂಡರು ಕೂಡ ಸಮರ್ಥಿಸಿಕೊಂಡಿದ್ದಾರೆ.
ವೃತ್ತಿಪರವಾಗಿರುವ ಮಹಿಳೆಯರು ತಮ್ಮ ಜೀವನದಲ್ಲಿ ಬಹುದೊಡ್ಡ ಯಶಸ್ಸನ್ನು ಪಡೆಯಬಹುದು. ಆದರೆ ಅವರು ತಮ್ಮ ಜೀವಿತಾವಧಿಯ ನಂತರ ತಮ್ಮ ನಿರ್ಧಾರಗಳಿಗಾಗಿ ಅವರು ಜವಾಬ್ದಾರರಾಗಿರುತ್ತಾರೆ ಮತ್ತು ಉತ್ತರ ನೀಡಬೇಕಾಗುತ್ತದೆ. ಆಗ ತಾವು ಆಯ್ಕೆ ಮಾಡಿಕೊಂಡಿದ್ದ ವೃತ್ತಿಯ ಬಗ್ಗೆ ಅವರು ವಿಷಾದಪಡಬೇಕಾಗುತ್ತದೆ ಎಂದು ಸುನ್ನಿ ಮುಸ್ಲಿಂ ಧಾರ್ಮಿಕ ಗುರು ಮೌಲಾನಾ ಅಬುಲ್ ಇರ್ಫಾನ್ ಫಿರಂಗಿಮಹ್ಲಿ ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರಿಂದ ವಿರೋಧ... ಅದೇ ಹೊತ್ತಿಗೆ ಧರ್ಮಗುರುಗಳು ಹೊರಡಿಸಿರುವ ಫತ್ವಾಕ್ಕೆ ಮುಸ್ಲಿಂ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಫತ್ವಾಕ್ಕೆ ಈಗ ಯಾವುದೇ ಅರ್ಥವಿಲ್ಲ ಎಂದು ಲಕ್ನೋದ ಖ್ಯಾತ ಫ್ಯಾಷನ್ ಡಿಸೈನರ್ ಆಸ್ಮಾ ಹುಸೈನ್ ಅಭಿಪ್ರಾಯಪಟ್ಟಿದ್ದಾರೆ. ಆಕೆ ಮಹಿಳೆಯರ ವಸ್ತ್ರವಿನ್ಯಾಸ ನಡೆಸುತ್ತಾ ಜೀವನ ಸಾಗಿಸುತ್ತಿದ್ದು, ಧರ್ಮಗುರುಗಳ ಪ್ರಕಾರ ಈ ಕೆಲಸ ಅನಿಸ್ಲಾಮಿಕವಾದುದು.
ನನ್ನ ಕೈಕೆಳಗೆ ಹತ್ತಾರು ವರ್ಷಗಳಿಂದ ಹಲವು ಮಂದಿ ಪುರುಷರು ಕೆಲಸ ಮಾಡುತ್ತಿದ್ದಾರೆ. ಅವರ ಜೀವನವು ನಾನು ನಡೆಸುತ್ತಿರುವ ಕೆಲಸವನ್ನೇ ಅವಲಂಭಿಸಿದೆ. ನಾನು ಕೆಲಸವನ್ನು ನಿಲ್ಲಿಸಿದಲ್ಲಿ ನನಗಿಂತಲೂ ನನಗಾಗಿ ಕೆಲಸ ಮಾಡುತ್ತಿರುವವರ ಜೀವನ ದುರ್ಬರವಾಗುತ್ತದೆ. ಅದೇ ಹೊತ್ತಿಗೆ ಬಹುಶಃ ಅಲ್ಲಾಹು ನನ್ನ ಪ್ರಾರ್ಥನೆಗಳನ್ನು ಸ್ವೀಕರಿಸಲಾರ ಎಂಬ ಭಾವನೆಯೂ ನನಗಿದೆ. ಆದರೆ ನಾನು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯನ್ನು ದೇವರು ಪರಿಗಣಿಸುತ್ತಾನೆ ಎಂಬ ಭರವಸೆ ನನಗಿದೆ ಎಂದು ಆಸ್ಮಾ ವಿವರಣೆ ನೀಡಿದ್ದಾರೆ.
ಲಕ್ನೋದ ಬ್ಯೂಟಿ ಪಾರ್ಲರ್ ಒಂದನ್ನು ನಡೆಸುತ್ತಿರುವ ವಜೀದಾ ಎಂಬ ಉದ್ಯಮಿಯ ಪ್ರಕಾರ ಎಲ್ಲಾ ಮುಸ್ಲಿಂ ಮಹಿಳೆಯರೂ ಕೆಲಸ ಮಾಡಬೇಕು.
ಇಂತಹ ಫತ್ವಾಗಳನ್ನು ಆಗಾಗ ಜಾರಿಗೊಳಿಸಲಾಗುತ್ತಿದ್ದು, ಇದರಿಂದ ಮುಂದೆ ಸಾಗುತ್ತಿರುವ ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಗಳಾಗುತ್ತವೆ. ನನ್ನ ಪ್ರಕಾರ ಪ್ರತಿ ಮುಸ್ಲಿಂ ಮಹಿಳೆಯೂ ಕೆಲಸಕ್ಕೆ ಹೋಗಬೇಕು ಎಂದು ಪುರುಷ ಹಾಗೂ ಮಹಿಳಾ ಗ್ರಾಹಕರನ್ನು ಹೊಂದಿರುವ ಪಾರ್ಲರ್ ಮಾಲಕಿ ತಿಳಿಸಿದ್ದಾರೆ.