ಮುಸ್ಲಿಮ್ ಮಹಿಳೆಯರು ಪುರುಷರ ಜತೆ ಕೆಲಸ ಮಾಡುವುದು ಇಸ್ಲಾಂ ತತ್ವ ಸಿದ್ದಾಂತಕ್ಕೆ ವಿರುದ್ಧ ಎಂದು ಫತ್ವಾ ಹೊರಡಿಸಿ , ನಂತರ ಅದಕ್ಕೆ ಸ್ಪಷ್ಟನೆ ನೀಡಿದ್ದ ಪ್ರಮುಖ ಮುಸ್ಲಿಮ್ ಸಂಘಟನೆಯಾದ ದಾರುಲ್ ಉಲೂಮ್ ದಿಯೋಬಂದ್ ಇದೀಗ ವಿಮೆ ಮಾಡಿಸುವುದು ಇಸ್ಲಾಮ್ ಶರಿಯತ್‌ಗೆ ವಿರುದ್ಧವಾದದ್ದು ಎಂದು ಹೇಳಿ ಫತ್ವಾ ಹೊರಡಿಸಿದೆ!
ವಿಮಾ ಪಾಲಿಸಿ ಮಾಡಿಸುವುದು ಶರಿಯಾ ಪ್ರಕಾರ ಕಾನೂನು ಬದ್ಧವೇ ಎಂಬ ಗೊಂದಲದ ಕುರಿತಂತೆ ದಾರೂಲ್ ಉಲೂಮ್ ಸಂಘಟನೆಯ ಇಫ್ತಾ ಇಲಾಖೆ ಈ ಬಗ್ಗೆ ಫತ್ವಾದಲ್ಲಿ ಸ್ಪಷ್ಟನೆ ನೀಡಿದೆ.
ವಿಮಾ ಪಾಲಿಸಿಗಳು ಬಡ್ಡಿ ವ್ಯವಹಾರ ಮತ್ತು ಜೂಜಿಗೆ ಸಮಾನಾಂತರವಾಗಿದ್ದರಿಂದ ಅವು ಇಸ್ಲಾಮ್ ನೀತಿಗೆ ವಿರುದ್ಧವಾದದ್ದು. ದೇಶದಲ್ಲಿನ ಲಕ್ಷಾಂತರ ಮುಸ್ಲಿಮರು ವಿಮಾ ಪಾಲಿಸಿ ಮಾಡಿಸುತ್ತಿದ್ದಾರೆ. ಇದು ನಷ್ಟ ಅಥವಾ ಹಾನಿಯಾದಾಗ ವಿಮಾದಾರನಿಗೆ ಅಥವಾ ಆತ ಹೆಸರಿಸಲ್ಪಟ್ಟ ನಾಮಿನಿಗೆ ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಕೊಡುವ ಒಪ್ಪಂದ ಎಂದು ಫತ್ವಾದಲ್ಲಿ ತಿಳಿಸಿದೆ.
ಏತನ್ಮಧ್ಯೆ ಮತ್ತೊಂದು ಸಂಘಟನೆಯಾದ ಜಮಾಯತ್ ಉಲೇಮಾ ಎ ಹಿಂದ್‌ನ ವಕ್ತಾರ ಅಬ್ದುಲ್ ಹಮೀದ್, ಫತ್ವಾಗಳನ್ನು ಏಕಾಏಕಿ ಸಾರ್ವತ್ರೀಕರಣಗೊಳಿಸಲಾಗದು. ಫತ್ವಾಗಳನ್ನು ಯಾವ ಸಂದರ್ಭದಲ್ಲಿ ಹೊರಡಿಸಲಾಗಿದೆ ಎಂಬುದನ್ನು ಮೊದಲು ಗಮನಿಸಬೇಕು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನಾ ಬಡ್ಡಿ ಸಂಬಂಧಿ ಬ್ಯಾಂಕ್ ಅಥವಾ ಇನ್ಸೂರೆನ್ಸ್ ಕಂಪನೆಗಳಲ್ಲಿ ಮುಸ್ಲಿಮರು ಕೆಲಸ ಮಾಡುವುದು ಇಸ್ಲಾಮ್‌ಗೆ ವಿರುದ್ಧವಾದದ್ದು ಎಂದು ದಾರೂಲ್ ಉಲೂಮ್ ಘೋಷಿಸಿತ್ತು. ಬ್ಯಾಂಕ್ ಅಥವಾ ಇನ್ಸೂರೆನ್ಸ್ ಕಂಪನಿಗಳಲ್ಲಿ ಮುಸ್ಲಿಮರು ಕೆಲಸ ಮಾಡುವುದು ಸರಿಯೇ ಎಂಬ ಬಗ್ಗೆ ದಾರೂಲ್ ಫತ್ವಾ ಮೂಲಕ ಈ ರೀತಿ ಸ್ಪಷ್ಟನೆ ಕೊಟ್ಟಿತ್ತು.