ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತ ಬಂದ್ ಟೀಕಾಕಾರರ ಬಾಯ್ಮುಚ್ಚಿಸಿದೆ: ಅಡ್ವಾಣಿ (BJP | L K Advani | price rise | Bharat bandh)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸತತ ಬೆಲೆಯೇರಿಕೆಗೆ ಕಾರಣವಾಗಿದ್ದರೂ ಈ ಕುರಿತು ಪ್ರತಿಪಕ್ಷ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ ಎಂಬ ಟೀಕೆಗಳು ಭಾರತ ಬಂದ್‌ನಿಂದಾಗಿ ಕೊನೆಯಾಗಬಹುದು ಎಂದು ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಿದ್ಧಾಂತವಾದಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಡ್ವಾಣಿ ಪತ್ರಕರ್ತರೊಂದಿಗೆ ಮಾತಿಗಿಳಿದರು.

ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಕುರಿತು ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯು ಸರಕಾರದ ನಿಲುವನ್ನು ಪ್ರಬಲವಾಗಿ ವಿರೋಧಿಸುತ್ತಿಲ್ಲ, ಈ ಬಗ್ಗೆ ಗಂಭೀರವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಟೀಕೆಗಳು ಬರುತ್ತಿದ್ದುದನ್ನು ಅವರು ಉಲ್ಲೇಖಿಸಿದರು.

ಜನಜೀವನ ದುರವಸ್ಥೆಗೆ ಕಾರಣವಾಗಿರುವ ಬೆಲೆಯೇರಿಕೆ ವಿಚಾರವನ್ನು ಜನತೆಯ ನಿರೀಕ್ಷೆಯಂತೆ ಗಮನ ಸೆಳೆಯುವಂತೆ ಮಾಡುವಲ್ಲಿ ಪ್ರತಿಪಕ್ಷ ವಿಫಲವಾಗಿದೆ ಎಂಬ ಟೀಕೆಗಳನ್ನು ನಾವು ಕೇಳುತ್ತಾ ಬಂದಿದ್ದೇವೆ. ಆದರೆ ಈ ಭಾರತ ಬಂದ್‌ನಿಂದ ಬಹುಶಃ ಆ ಟೀಕೆಗಳು ಕೊನೆಗೊಂಡಿದೆ ಎನ್ನುವುದು ನನ್ನ ಅನಿಸಿಕೆ ಎಂದರು.

ಅದೇ ಹೊತ್ತಿಗೆ ಬಂದ್‌ ಅಭೂತಪೂರ್ವ ಯಶಸ್ವಿ ಕಾಣಲು ಸಹಕರಿಸಿದವರಿಗೆ ಅಡ್ವಾಣಿ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತ ಬಂದ್ ಭಾರೀ ಯಶಸ್ಸು ಕಾಣಲು ಸಹಕರಿಸಿದ ದೇಶದ ಜನತೆಗೆ ಮಾಧ್ಯಮಗಳ ಮೂಲಕ ಧನ್ಯವಾದ ಹೇಳಲು ಬಯಸುತ್ತೇನೆ. ಜತೆಗೆ ರಾಜಧಾನಿಯಲ್ಲಿ ಪರಿಣಾಮಕಾರಿ ಬಂದ್ ನಡೆಸಲು ಬೆಂಬಲ ನೀಡಿದವರಿಗೂ ಕೃತಜ್ಞತೆ ಅರ್ಪಿಸಲೇಬೇಕು ಎಂದರು.

ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳ ವಾಪಸ್ ಪಡೆಯುವಂತೆ ಆಗ್ರಹಿಸಿ ಎನ್‌ಡಿಎ, ಎಡರಂಗ ಸೇರಿದಂತೆ ಹಲವು ಪ್ರತಿಪಕ್ಷಗಳು ಸೋಮವಾರ ಬಂದ್‌ಗೆ ಕರೆ ನೀಡಿದ್ದವು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಚಿಂತನೆಯಂತೆ ಬಿಜೆಪಿ ಒಂದು ಭಿನ್ನ ಪಕ್ಷ ಎಂಬುದನ್ನು ನಿರೂಪಿಸಲು ಕಾರ್ಯಕರ್ತರು ಹೋರಾಟ ಮಾಡಬೇಕಾಗಿದೆ ಎಂದು ಮುಖರ್ಜಿಯವರಿಗೆ ಗೌರವ ಅರ್ಪಿಸುತ್ತಾ ಅಡ್ವಾಣಿ ಕರೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ