ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನನ್ನ ಪಾತ್ರ ಏನಿಲ್ಲ, ನಾನು ಮುಗ್ಧ ಎಂದು ಹೇಳಿದ ಬೆನ್ನಿಗೆ ಆಂಬುಲೆನ್ಸ್‌ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಅಬ್ದುಲ್ ನಾಸಿರ್ ಮದನಿಯನ್ನು ಸುತ್ತುವರಿದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಇಂದು ಮಧ್ಯಾಹ್ನ ಕೊಲ್ಲಂನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮದನಿ, ತಾನು ಪ್ರಾರ್ಥನೆ ಸಲ್ಲಿಸಿದ ನಂತರ ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದ. ಆದರೆ ಪ್ರಾರ್ಥನೆ ಸಲ್ಲಿಸಿದ ನಂತರ ಆಂಬುಲೆನ್ಸ್‌ನಲ್ಲಿ ತೆರಳಲು ಯತ್ನಿಸಿದಾಗ ಕೇರಳ ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.
ನಂತರ ಆರೋಪಿಯನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆತನನ್ನು ಕರ್ನಾಟಕ ಪೊಲೀಸರು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ.
ಮದನಿ ನೇರವಾಗಿ ನ್ಯಾಯಾಲಯಕ್ಕೆ ಹೋಗಿ ಶರಣಾಗಬೇಕೆಂಬ ನಿಟ್ಟಿನಲ್ಲಿ ಆಂಬುಲೆನ್ಸ್ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಹೊತ್ತಿನಲ್ಲಿ ನಾಟಕೀಯ ಪ್ರಸಂಗಗಳೇ ನಡೆದರೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ವರದಿಗಳು ಹೇಳಿವೆ.
ನಾನು ಮುಗ್ಧ, ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ... ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಕುರಿತು ನನಗೇನೂ ಗೊತ್ತಿಲ್ಲ, ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿರುವ ಶಂಕಿತ ಆರೋಪಿ ಅಬ್ದುಲ್ ನಾಸಿರ್ ಮದನಿ, ಇಂದೇ ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದ.
ಕೇರಳದ ಕೊಲ್ಲಂನಲ್ಲಿ ನಡೆಸಿದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಮದನಿ, ಕರ್ನಾಟಕ ಪೊಲೀಸ್ ವಿರುದ್ಧ ಹರಿಹಾಯ್ದಿದ್ದಾನೆ. ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾನು ಅಮಾಯಕ. ನನ್ನನ್ನು ಮುಗಿಸಲು ಭಾರೀ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದ.
ಪವಿತ್ರ ಕುರಾನ್ ಮೇಲೆ ವಿಶ್ವಾಸವಿರಿಸಿಕೊಂಡಿರುವ ನಾನು ಕಾನೂನು ಉಲ್ಲಂಘಿಸಿಲ್ಲ. ನಿಜ ಹೇಳಬೇಕೆಂದರೆ ಸರಣಿ ಸ್ಫೋಟದ ದಿನಾಂಕವೂ ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನಾನು ಅಮಾಯಕ ಎಂದು ಆತ ಹೇಳಿದ್ದ.
ದೇವರ ನಂತರ ನಾನು ಅಪಾರ ನಂಬಿಕೆಯಿರಿಸಿರುವುದು ಕೋರ್ಟ್ ಮತ್ತು ಸಂವಿಧಾನ. ಹಾಗಾಗಿ ಕಾನೂನು ಮೂಲಕವೇ ನಾನು ಹೋರಾಟ ಮುಂದುವರಿಸಲಿದ್ದೇನೆ. ಆದರೆ ಮುಂದೆ ಬಿಡುಗಡೆ ಭಾಗ್ಯ ದೊರೆಯುವುದೆಂಬ ಭರವಸೆ ನನ್ನಲಿಲ್ಲ. ಯಾಕೆಂದರೆ ಇದು ಕೇವಲ ಒಂದು ಕೇಸ್ ಮಾತ್ರವಲ್ಲ. ನನ್ನನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮಾಡಿರುವ ವ್ಯವಸ್ಥಿತ ಷಡ್ಯಂತ್ರ ಎಂದು ವಿವರಣೆ ನೀಡಿದ್ದ.
ಮಧ್ನಾಹ್ನ ನಮಾಜ್ ಮುಗಿಸಿದ ನಂತರ ನಾನು ನ್ಯಾಯಾಲಯಕ್ಕೆ ಶರಣಾಗಲಿದ್ದೇನೆ. ಆದರೆ ತಿರುಗಿ ಬರುವ ಭರವಸೆಯಿಲ್ಲ. ಮುಂದೊಂದು ದಿನ ಮುಂಬೈ ಭಯೋತ್ಪಾದನಾ ದಾಳಿ ಅಥವಾ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯಲ್ಲೂ ನನ್ನ ಪಾತ್ರವಿದೆಯೆಂಬ ಸುದ್ದಿಯೂ ಬರಬಹುದು ಎಂದು ಆರೋಪಿ ವ್ಯಂಗ್ಯವಾಡಿದ್ದ.
ಪತ್ರಿಕಾಗೋಷ್ಠಿಯುದ್ದಕ್ಕೂ ತಾನೊಬ್ಬ ಸಂಭಾವಿತ ಎಂಬುದನ್ನು ಬಿಂಬಿಸಲು ಯತ್ನಿಸಿರುವ ಮದನಿ, ನಾನು ಈ ಹಿಂದೆ ನೀಡಿರುವ ಎಲ್ಲಾ ವಾಗ್ದಾನಗಳನ್ನು ಪಾಲಿಸುತ್ತೇನೆ; ವಾರಂಟ್ ಪ್ರತಿ ನನ್ನ ಕೈಗೆ ಇನ್ನೂ ಸಿಗದ ಹಿನ್ನೆಲೆಯಲ್ಲಿ ಇದುವರೆಗೆ ಶರಣಾಗಿರಲಿಲ್ಲ. ಆದರೆ ಕಾನೂನನ್ನು ಪಾಲಿಸುತ್ತೇನೆ ಎಂದಿದ್ದ.
ನನ್ನ ಆರೋಗ್ಯ ಸರಿಯಿಲ್ಲ. ಹಲವು ರೋಗಗಳಿವೆ. ಇದೂ ಸೇರಿದಂತೆ ನನ್ನ ನಿಲುವನ್ನು ಕೂಡ ಕೋರ್ಟ್‌ಗೆ ತಿಳಿಸಲಿದ್ದೇನೆ. ನನ್ನ ಬಂಧನವು ಕೋಮು ಗಲಭೆಗೆ ಎಡೆಮಾಡಿಕೊಡಬಾರದು. ಸಮಾಜದಲ್ಲಿ ಯಾವುದೇ ಗಲಭೆಗೂ ಪಿಡಿಪಿ ಮುಂದಾಗಬಾರುದು. ಪ್ರತಿಭಟನೆ ನಡೆಸಿದರೂ ಶಾಂತಿ ಉಲ್ಲಂಘನೆಯಾಗ ಬಾರದು. ಅಲ್ಲದೆ ಹಿಂದೂ-ಮುಸ್ಲಿಮರ ನಡುವಿನ ಕೋಮು ಗಲಭೆಗೂ ಎಡೆಯಾಗಬಾರದು ಎಂದು ಮನವಿ ಮಾಡಿಕೊಂಡ.
ಕೇರಳದ ಜನತೆಯು ನನಗಾಗಿ ವಿಶೇಷ ಫ್ರಾರ್ಥನೆ ಸಲ್ಲಿಸಬೇಕು. ಯಾಕೆಂದರೆ ಸರ್ವಶಕ್ತನಾದ ದೇವರಿಗೆ ಮಾತ್ರ ನನ್ನನ್ನು ರಕ್ಷಿಸಲು ಸಾಧ್ಯ ಎಂದು ಹೇಳಿ ಜನತೆಯ ಅನುಕಂಪ ಗಿಟ್ಟಿಸಲು ಮದನಿ ಯತ್ನಿಸಿದ್ದಾನೆ.