ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಯಿ ಬಾಬಾ ಅಂತರಂಗದ ಕೊಠಡಿ ಬ್ರೇಕ್: ಏನಿದೆ ಅದರಲ್ಲಿ? (Sathya Sai Baba | Yajurveda mandir | Yajur Mandir | Puttaparti | Satyajit)
ಸತ್ಯ ಸಾಯಿ ಬಾಬಾ ನಿಧನವಾದ ಸುಮಾರು ಎರಡು ತಿಂಗಳ ಬಳಿಕ, ಬಾಬಾ ಅವರ ಖಾಸಗಿ ಕೊಠಡಿ, ಭಾರೀ ಸಂಪತ್ತುಗಳಿವೆ ಎಂದೆಲ್ಲಾ ಊಹಾಪೋಹಗಳು ಹಬ್ಬಿದ್ದ 'ಯಜುರ್ ಮಂದಿರ'ವನ್ನು ಕೊನೆಗೂ ತೆರೆಯಲಾಗಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಪುಟ್ಟಪರ್ತಿಯ ಪ್ರಶಾಂತಿ ನಿಲಯ ಆಶ್ರಮದೊಳಗಿದ್ದ ಈ ಯಜುರ್ ಮಂದಿರವನ್ನು ಸೆಂಟ್ರಲ್ ಸಾಯಿ ಟ್ರಸ್ಟ್‌ನ ಸದಸ್ಯರು, ಹಿರಿಯ ನ್ಯಾಯಾಂಗದ ಅಧಿಕಾರಿಗಳು ಹಾಗೂ ಪೊಲೀಸಧಿಕಾರಿಗಳ ಉಪಸ್ಥಿತಿಯಲ್ಲಿ ತೆರೆಯಲಾಯಿತು. ಅದರೊಳಗಿನ ಬೀಗವನ್ನೆಲ್ಲಾ ತೆರೆಯಲಾಯಿತಾದರೂ, ಮಾಧ್ಯಮದವರಿಗೆ ಅದರೊಳಗೆ ಪ್ರವೇಶ ನೀಡಿರಲಿಲ್ಲ.

ಯಜುರ್ ಮಂದಿರವನ್ನು ತೆರೆಯಲು ಎರಡು ದಿನಗಳ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಒಳಗೆ ಏನೇನಿದೆ ಎಂಬುದರ ಕುರಿತು ಮಾಹಿತಿಯಿನ್ನೂ ಲಭ್ಯವಾಗಿಲ್ಲ.

ಬುಧವಾರ ರಾತ್ರಿಯೇ ಟ್ರಸ್ಟ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್.ಭಗವತಿ ಕೂಡ ಯಜುರ್ ಮಂದಿರ ತೆರೆಯುವಾಗ ಹಾಜರಿದ್ದರು. ಆದರೆ ಸತ್ಯಸಾಯಿ ಯುನಿವರ್ಸಿಟಿ ಉಪಕುಲಪತಿಯಾಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.

ಯಜುರ್ ಮಂದಿರದ ಬಯೋಮೆಟ್ರಿಕ್ ಬೀಗ ವ್ಯವಸ್ಥೆಯ ಬಗ್ಗೆ ಗೊತ್ತಿದ್ದುದು ಸಾಯಿ ಬಾಬಾ ಅವರ ಆಪ್ತರಾದ, ಮಂಗಳೂರು ಮೂಲದ ಸತ್ಯಜಿತ್ ಅವರಿಗೆ ಮಾತ್ರ. ಅವರೇ ಟ್ರಸ್ಟ್ ಸದಸ್ಯರೊಂದಿಗೆ ತೆರಳಿ ಎಲ್ಲವನ್ನೂ ಹೇಳಿಕೊಟ್ಟಿದ್ದರು. ಸಾಯಿ ಬಾಬಾ ಅವರು ಬದುಕಿದ್ದಾಗ ಅವರ ಅಂತರಂಗದ ಕೊಠಡಿ ಪ್ರವೇಶಕ್ಕೆ ಅವಕಾಶವಿದ್ದದ್ದು ಸತ್ಯಜಿತ್‌ಗೆ ಮಾತ್ರ ಎಂಬುದು ಇಲ್ಲಿ ಗಮನಾರ್ಹ.

ಟ್ರಸ್ಟ್‌ನ ಮತ್ತೊಬ್ಬ ಸದಸ್ಯ, ಸಾಯಿ ಬಾಬಾ ಆಸ್ತಿಗೆ ಉತ್ತರಾಧಿಕಾರಿ ಎಂದೆಲ್ಲಾ ಬಿಂಬಿಸಲ್ಪಟ್ಟಿದ್ದ ಬಾಬಾ ಅವರ ಸಹೋದರನ ಮಗ, ಆರ್.ಜೆ.ರತ್ನಾಕರ ಹಾಗೂ ಇತರ ಸದಸ್ಯರಾದ ಎಸ್.ವಿ.ಗಿರಿ, ವಿ.ಶ್ರೀನಿವಾಸನ್ ಮತ್ತು ಟ್ರಸ್ಟ್ ಕಾರ್ಯದರ್ಶಿ ಕೆ.ಚಕ್ರವರ್ತಿ ಕೂಡ ಜತೆಗಿದ್ದರು.

ಯಜುರ್ವೇದ ಮಂದಿರ ಎಂದೂ ಕರೆಯಲಾಗುವ ಯಜುರ್ ಮಂದಿರವು ಕಳೆದ ಮಾರ್ಚ್ 28ರಂದು ಸಾಯಿ ಬಾಬಾ ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಮುಚ್ಚಲ್ಪಟ್ಟಿತ್ತು. ಸತ್ಯ ಸಾಯಿ ಬಾಬಾ ಅವರು ಏಪ್ರಿಲ್ 24ರಂದು ಇಹಲೋಕ ತ್ಯಜಿಸಿದ್ದರು.

ಸತ್ಯ ಸಾಯಿ ಬಾಬಾ ಅವರ ಅಂತರಂಗದ ಕೊಠಡಿಯಲ್ಲಿ ದೇಶ ವಿದೇಶದ ಭಕ್ತರು ಕೊಡುಗೆಯಾಗಿ ನೀಡಿದ್ದ ಚಿನ್ನ, ಆಭರಣಗಳು, ನಗದು ಇತ್ಯಾದಿ ಭಾರೀ ಪ್ರಮಾಣದಲ್ಲಿವೆ ಎಂಬ ಬಗ್ಗೆ ಭಾರೀ ಊಹಾಪೋಹಗಳೆದ್ದಿದ್ದವು. ಸತ್ಯ ಸಾಯಿ ಬಾಬಾ ಅವರು ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿರುವಾಗ, ಪ್ರಶಾಂತಿ ನಿಲಯದಿಂದ ಭಾರೀ ಚಿನ್ನ, ಆಭರಣ ಇತ್ಯಾದಿಗಳನ್ನೆಲ್ಲಾ ಸಾಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ ಟ್ರಸ್ಟ್ ಇದನ್ನೆಲ್ಲಾ ನಿರಾಕರಿಸಿತ್ತು. ತಮ್ಮೆದುರೇ ಯಜುರ್ ಮಂದಿರದ ಬೀಗ ತೆಗೆಯಬೇಕು ಎಂದು ಭಕ್ತರು ಆಗ್ರಹಿಸಿದ್ದರು.

ಆದರೆ, ಅದರೊಳಗೇನಿತ್ತು ಎಂಬುದನ್ನು ಬಹಿರಂಗಪಡಿಸದಿರುವುದು ಹಲವು ಶಂಕೆಗಳಿಗೂ ಕಾರಣವಾಗಿದೆ.
ಇವನ್ನೂ ಓದಿ