ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯಾಗ್ರಹವೇ 'ಅಕ್ರಮ', ಲಾಠಿ ಬೀಸೇ ಇಲ್ಲ ಎಂದ ಪೊಲೀಸರು! (Ramlila Maidan | Crackdown | Delhi Police | Baba Ramdev)
PTI
ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ್ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಅಂಹಿಸಾತ್ಮಕ ಪ್ರತಿಭಟನೆ ಮಾಡಿ, ಮಲಗಿ ನಿದ್ರಿಸುತ್ತಿದ್ದ ಮಹಿಳೆಯರು, ವೃದ್ಧರು, ಮಕ್ಕಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಪ್ರತಿಭಟನೆಯನ್ನು ಹತ್ತಿಕ್ಕಿದರು ಎಂಬ ಆರೋಪಗಳು ಮತ್ತು ರಾಜ ಬಾಲಾ ಎಂಬ ಮಹಿಳೆಯಿನ್ನೂ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ನಡುವೆಯೇ, ಜೂ.4-5ರ ಮಧ್ಯರಾತ್ರಿ "ನಾವೇನೂ ಲಾಠಿ ಚಾರ್ಜ್" ಮಾಡಿಲ್ಲ, ಯೋಗ ಶಿಬಿರಕ್ಕೆ ಅನುಮತಿ ತೆಗೆದುಕೊಂಡು ಪ್ರತಿಭಟನಾ ಸಮಾವೇಶ ನಡೆಸಿದ ಕಾರಣಕ್ಕೆ ತೆರವುಗೊಳಿಸಲಾಯಿತು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್‌ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ, ಪ್ರತಿಭಟನಾಕಾರರ ದಮನದ ಕುರಿತು ಯಾವುದೇ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ, ಸ್ವತಃ ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವರದಿ ಸಲ್ಲಿಸುವಂತೆ ಸರಕಾರ ಹಾಗೂ ದೆಹಲಿ ಪೊಲೀಸರಿಗೆ ಸೂಚಿಸಿತ್ತು.

ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿಗೆ ಶುಕ್ರವಾರ ಸಲ್ಲಿಸಿದ ಅರ್ಜಿಯಲ್ಲಿ ದೆಹಲಿ ಪೊಲೀಸರು, ರಾಮಲೀಲಾ ಮೈದಾನದಲ್ಲಿ ಜನರು ಸೇರಿದ್ದು ಅಕ್ರಮ. ಆ ಮೈದಾನದಲ್ಲಿ ಯೋಗ ಶಿಬಿರಕ್ಕೆ 5000 ಮಂದಿ ನೆರೆಯಲು ಮಾತ್ರ ಅವಕಾಶ ಕೊಡಲಾಗಿತ್ತೇ ಹೊರತು ಬೇರಾವುದೇ ರಾಜಕೀಯ ಉದ್ದೇಶಗಳಿಗಾಗಿ ಅಲ್ಲ. ಹೀಗಾಗಿ ಅಕ್ರಮವಾಗಿ ಜನರು ಸೇರಿದ್ದರಿಂದ ಅವರನ್ನು ಅಲ್ಲಿಂದ ಆ ರಾತ್ರಿ ತೆರವುಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

ಮೈದಾನದಲ್ಲಿ ಸುಮಾರು 65 ಸಾವಿರ ಮಂದಿ ಸೇರಿದ್ದರು. ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ವಿರೋಧಿಸಿ ಹಾಗೂ ವಿದೇಶದಲ್ಲಿ ರಾಜಕಾರಣಿಗಳು, ಉದ್ಯಮಿಗಳು ಕೂಡಿಟ್ಟಿರುವ ಕಾಳಧನವನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರಲು ಈ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಆದರೆ ಸರಕಾರದಿಂದ ಸೂಚನೆ ಪಡೆದು ಮಧ್ಯರಾತ್ರಿಯಲ್ಲಿ ಮೈದಾನ ಪ್ರವೇಶಿಸಿದ ಪೊಲೀಸರು, ಲಾಠಿ ಬೀಸುತ್ತಾ, ಅಶ್ರುವಾಯು ಸಿಡಿಸುತ್ತಾ, ಮಲಗಿದ್ದವರನ್ನೆಲ್ಲಾ ಬಡಿದೋಡಿಸಿದ್ದರು ಎಂದು ಆರೋಪಿಸಲಾಗಿದೆ. ಅಲ್ಲಿಂ ರಾಮದೇವ್ ಮತ್ತು ಬೆಂಬಲಿಗರು ಪೊಲೀಸರಿಂದ ತಪ್ಪಿಸಿಕೊಂಡು ಹರಿದ್ವಾರಕ್ಕೆ ತೆರಳಿ ಅಲ್ಲಿ ಸತ್ಯಾಗ್ರಹ ಮುಂದುವರಿಸಿದ್ದರು.

ಆದರೆ, ಘಟನೆಯಲ್ಲಿ 72 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು ಮತ್ತು ಅವರಿಗೆ ಚಿಕಿತ್ಸೆ ನೀಡಿ ಹೆಚ್ಚಿನವರನ್ನು ಬಿಡುಗಡೆಗೊಳಿಸಲಾಗಿದ್ದರೆ, ರಾಜ ಬಾಲಾ ಎಂಬ ಮಹಿಳೆಯೊಬ್ಬರು ಇಂದಿಗೂ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ.

ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ಹಕ್ಕುಗಳನ್ನು ದಮನಿಸುವ ಕೇಂದ್ರದ ಪ್ರಯತ್ನವಿದು ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ತಮ್ಮ ವರದಿಯಲ್ಲಿ ಪೊಲೀಸರು, ತಾವೇನೂ ಲಾಠಿ ಚಾರ್ಜ್ ಮಾಡಿಲ್ಲ. ಅಥವಾ ಬಾಬಾ ಬೆಂಬಲಿಗರ ಮೇಲೆ ಯಾವುದೇ ಬಲ ಪ್ರಯೋಗ ಮಾಡಿಲ್ಲ. (ಮಲಗಿ ನಿದ್ರಿಸುತ್ತಿದ್ದ) ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದಾಗಿ ಅಶ್ರುವಾಯು ಪ್ರಯೋಗಿಸಬೇಕಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮೈದಾನದಲ್ಲಿ ಸೇರಿದ್ದ "ಮುಗ್ಧ" ಜನರ ಮೇಲೆ "ಹಿಂಸಾತ್ಮಕ ಬಲ ಪ್ರಯೋಗಿಸಿರುವುದು" ಹಾಗೂ "ಪೊಲೀಸ್ ದೌರ್ಜನ್ಯ"ದ ಕುರಿತು ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿತ್ತು.
ಇವನ್ನೂ ಓದಿ