ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ: 'ಮೌನಿ' ಸೋನಿಯಾಗೆ ಬಿಜೆಪಿ ನಾಲ್ಕು ಪ್ರಶ್ನೆಗಳು (Congress | Corruption | Sonia Gandhi | BJP | Darbar)
ನಿತಿನ್ ಗಡ್ಕರಿ ನಾಯಕನಾಗಲು ಅರ್ಹರೇ ಅಲ್ಲ ಎಂಬ ಕಾಂಗ್ರೆಸ್ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಪ್ರತಿಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ಹಲವಾರು ವರ್ಷ ಸೇವೆ ಮಾಡಿ ಅಧ್ಯಕ್ಷ ಹುದ್ದೆಗೇರುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ದರ್ಬಾರ್ ಸಂಸ್ಕೃತಿ ಇದೆ. ಅಲ್ಲಿ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗುತ್ತಾರೆ ಎಂದು ತಿರುಗೇಟು ನೀಡಿದೆಯಲ್ಲದೆ, ಭ್ರಷ್ಟಾಚಾರದ ಬಗೆಗೆ ಮೌನಮೂರ್ತಿಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ನಾಯಕರೆಲ್ಲರೂ ದರ್ಬಾರು ಸಂಸ್ಕೃತಿಗೆ ಒಗ್ಗಿಕೊಂಡುಬಿಟ್ಟಿದ್ದಾರೆ. ನೆಹರು ಕುಟುಂಬದವರು ಬಿಟ್ಟು ಹೊರಗಿನವರು ಪಕ್ಷದ ಅಧ್ಯಕ್ಷರಾಗುವುದು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ, ಪಕ್ಷಾಧ್ಯಕ್ಷರನ್ನು ಹೇಗೆ ಆರಿಸುವುದು ಎಂಬುದೇ ಆ ಪಕ್ಷಕ್ಕೆ ಗೊತ್ತಿಲ್ಲ ಎಂದು ಟೀಕಿಸಿದರಲ್ಲದೆ, ಭ್ರಷ್ಟಾಚಾರಕ್ಕೆ ಸಂಬಂಧಿಸಿ ಎಲ್ಲ ಮೂಲೆಗಳಿಂದಲೂ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್ ತೀವ್ರವಾಗಿ ಹತಾಶವಾಗಿದೆ ಎಂದರು.

ಸೋನಿಯಾಗೆ ನಾಲ್ಕು ಪ್ರಶ್ನೆಗಳು
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವುದು ಮತ್ತು ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿಕೆ ನೀಡುವುದು ಎರಡೂ ಒಂದೇ ಎಂಬ ಪಕ್ಷಾಧ್ಯಕ್ಷ ನಿತಿನ್ ಗಡ್ಕರಿ ಟೀಕೆಯೇ ಕಾಂಗ್ರೆಸಿಗರು ಆ ರೀತಿಯ ಹೇಳಿಕೆ ನೀಡಲು ಕಾರಣವಾಗಿತ್ತು. ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ತಿಳಿಸಿರುವ ರವಿಶಂಕರ್ ಪ್ರಸಾದ್, ಸೋನಿಯಾ ಗಾಂಧಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ.
1. 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ರೂಪಾಯಿ ಲೂಟಿಯಾಗುತ್ತಿರುವಾಗ ನೀವು ಮೌನವಾಗಿದ್ದುದೇಕೆ?
2. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 76 ಸಾವಿರ ಕೋಟಿ ಲೂಟಿಯಾಗಿ, ಶುಂಗ್ಲು ಕಮಿಟಿ ತನಿಖಾ ವರದಿ ನೀಡಿ, ಅದರಲ್ಲಿ ದೆಹಲಿಯ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನೂ ಹೆಸರಿಸಲಾಗಿದ್ದರೂ ಮೌನವಾಗಿ ಕುಳಿತಿರುವುದೇಕೆ?
3. ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ರಾಶಿ ರಾಶಿ ಫೈಲುಗಳು ನಾಪತ್ತೆಯಾದಾಗಲೂ ಮೌನ ತಾಳಿರುವುದೇಕೆ?
4. ಅಕ್ರಮ ನಡೆಸಿದ ದೆಹಲಿ ಕಾಂಗ್ರೆಸ್ ಪಿಡಬ್ಲ್ಯುಡಿ ಸಚಿವ ರಾಜ್ ಕುಮಾರ್ ಚೌಹಾಣ್ ಅವರ ವಿರುದ್ಧ ತನಿಖೆ ನಡೆಸಿದ ಲೋಕಾಯುಕ್ತರು, ಸಚಿವರ ವಜಾಕ್ಕೆ ಶಿಫಾರಸು ಮಾಡಿ ರಾಷ್ಟ್ರಪತಿಗೆ ವರದಿ ಸಲ್ಲಿಸಿದ್ದರು. ಆದರೆ ರಾಷ್ಟ್ರಪತಿಯೊಂದಿಗೆ 'ಹೊಂದಾಣಿಕೆ' ಮಾಡಿಕೊಂಡ ನಿಮ್ಮ ಸರಕಾರ, ಈ ವರದಿಯನ್ನು ತಿರಸ್ಕರಿಸುವಂತೆ ನೋಡಿಕೊಂಡರು. ಈಗಲೂ ಮೌನ ತಾಳಿರುವುದೇಕೆ?
ಎಂದು ಪ್ರಶ್ನಿಸಿರುವ ರವಿಶಂಕರ್ ಪ್ರಸಾದ್, ಸೋನಿಯಾ ಗಾಂಧಿ ಎಂದಿಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಪಕ್ಷಾಧ್ಯಕ್ಷರ ವಿರುದ್ಧ ಹಾಗೂ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ನಿಮ್ಮ ಪಕ್ಷದ ಹಿರಿಯ ಮುಖಂಡರು 'ಅನಾಗರಿಕ' ಮತ್ತು 'ಕೀಳುದರ್ಜೆಯ' ಭಾಷೆ ಪ್ರಯೋಗಿಸಿದ್ದಾರೆ, ಅದಕ್ಕೆ ಈ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷವು ಕ್ಷಮೆ ಯಾಚಿಸಬೇಕು ಎಂದೂ ಪ್ರಸಾದ್ ಆಗ್ರಹಿಸಿದರು.
ಇವನ್ನೂ ಓದಿ