ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಜುರ್ ಮಂದಿರದೊಳಗೆ ಗರಿಗರಿ ನೋಟುಗಳು, ಚಿನ್ನ, ಬೆಳ್ಳಿ (12 crores | 98 kgs gold | Found in | Sri Sathya Sai Baba's room)
PTI
PTI
ಸತ್ಯಸಾಯಿ ಬಾಬಾ ಅವರ ಆಶ್ರಮ ಪ್ರಶಾಂತಿ ನಿಲಯಂನಲ್ಲಿರುವ ಅಂತರಂಗದ ಕೊಠಡಿ 'ಯಜುರ್ವೇದ ಮಂದಿರ'ದಲ್ಲಿ ಏನಿರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮಂದಿರದಲ್ಲಿ 11.56 ಕೋಟಿ ರೂಪಾಯಿ ನಗದು ಹಾಗೂ 98 ಕೆಜಿ ಚಿನ್ನ, 307 ಕೆಜಿ ಬೆಳ್ಳಿ ಪತ್ತೆಯಾಗಿದೆ. ಅಲ್ಲಿದ್ದ ಹಣವನ್ನು ಎಣಿಸಲು 20 ಜನರಿಗೆ ಸುಮಾರು 36 ಗಂಟೆ ಕಾಲಾವಕಾಶ ಬೇಕಾಯಿತು. ಎಂದು ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ಹಣವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿರುವ ಸತ್ಯಸಾಯಿ ಬಾಬಾ ಅವರ ಪ್ರಶಾಂತಿನಿಲಯಂ ಟ್ರಸ್ಟ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿನ್ನ ಹಾಗೂ ಬೆಳ್ಳಿಯ ಮೌಲ್ಯವನ್ನು ಅಂದಾಜು ಮಾಡುತ್ತಿದ್ದಾರೆ. ಈ ಕುರಿತು ಟ್ರಸ್ಟ್‌ ಪತ್ರಿಕಾ ಹೇಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದ ಆಧ್ಯಾತ್ಮಿಕ ಗುರು ಸತ್ಯಸಾಯಿಬಾಬಾ ಅವರು ಕಳೆದ ಏಪ್ರಿಲ್‌ 24ರಂದು ನಿಧನರಾಗಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಸಾಯಿ ಬಾಬಾ ಅವರು ಮಾರ್ಚ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಯಜುರ್ ಮಂದಿರಕ್ಕೆ ಬೀಗಮುದ್ರೆ ಹಾಕಲಾಗಿತ್ತು. ಸತ್ಯಸಾಯಿ ಟ್ರಸ್ಟ್‌ ಸದಸ್ಯರು ಹಾಗೂ ಬಾಬಾ ಅವರ ಆಪ್ತ ಸಹಾಯಕರಾಗಿದ್ದ ಸತ್ಯಜಿತ್‌ ಅವರು ಗುರುವಾರ ಈ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಮಂದಿರದ ಬಯೋಮೆಟ್ರಿಕ್ ಬೀಗಕ್ಕೆ ತಮ್ಮ ಬೆರಳ ಮುದ್ರೆಯನ್ನು ಇರಿಸುವ ಮೂಲಕ ಯಜುರ್ ಮಂದಿರದ ಬಾಗಿಲು ತೆಗೆದಿದ್ದರು. ಈ ಸಂದರ್ಭದಲ್ಲಿ ಪೊಲೀಸರೂ ಹಾಜರಿರಬೇಕು ಎಂಬ ಸ್ಥಳೀಯರ ಮನವಿಯನ್ನು ಟ್ರಸ್ಟ್‌ ತಿರಸ್ಕರಿಸಿತ್ತು. ಅಲ್ಲದೆ ಮಾಧ್ಯಮಗಳಿಗೂ ಒಳಗೆ ಪ್ರವೇಶವಿರಲಿಲ್ಲ. ಆದರೆ, ಹಣ ಮತ್ತು ಲಾಕರ್ ಇದ್ದುದರಿಂದಾಗಿ ಸಂಬಂಧಪಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಅವರಿಗೆ ಒಳ ಪ್ರವೇಶ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಸಾಯಿ ಬಾಬಾ ಅವರ ಒಂದು ಜೊತೆ ಚಿನ್ನದ ಚಪ್ಪಲಿಯೂ ಪತ್ತೆಯಾಗಿದೆ ಎಂದು ಖಚಿತವಲ್ಲದ ವರದಿಗಳು ತಿಳಿಸಿವೆ.

ಆಸ್ತಿಗೆ ಉತ್ತರಾಧಿಕಾರಿ ಸತ್ಯಜಿತ್?

ಬಾಬಾ ಅವರ ಆಪ್ತ ಕಾರ್ಯದರ್ಶಿಯಾಗಿದ್ದು ಅವರ ಕೊನೆಯುಸಿರಿನವರೆಗೂ ಅವರೊಂದಿಗಿದ್ದ ಕರ್ನಾಟಕದ ಮಂಗಳೂರು ಮೂಲದ ಸತ್ಯಜಿತ್‌ ಅವರೇ ಟ್ರಸ್ಟ್‌ನ ಉತ್ತರಾಧಿಕಾರಿಯಾಗಬೇಕು ಮತ್ತು ಎಲ್ಲ ಆಸ್ತಿಪಾಸ್ತಿಗೆ ಅವರೇ ಒಡೆಯರಾಗಬೇಕು ಎಂದು ಬಾಬಾ ಉಯಿಲು ಬರೆದಿದ್ದಾರೆ, ಬಾಬಾ ಅವರ ಅಂತ್ಯಕ್ರಿಯೆಯ ನಂತರ ಈ ಬಗ್ಗೆ ಸತ್ಯಜಿತ್‌ ಅವರೇ ಬಹಿರಂಗಪಡಿಸಲಿದ್ದಾರೆ ಎಂಬ ಸುದ್ದಿಯೂ ಬಾಬಾ ಅವರ ನಿಧನದ ಸಂದರ್ಭದಲ್ಲಿ ಹರಿದಾಡುತ್ತಿತ್ತು. ಆದರೆ ಆನಂತರ ಈ ಸುದ್ದಿಗೆ ಪುಷ್ಟಿ ನೀಡುವ ಯಾವ ಅಂಶಗಳೂ ಪತ್ತೆಯಾಗಿರಲಿಲ್ಲ.

ಈಗ ಯಜುರ್ ಮಂದಿರದಲ್ಲಿ ಸತ್ಯಜಿತ್‌ ಪರವಾಗಿ ಬಾಬಾ ಅವರು ಬರೆದಿರುವ ಉಯಿಲು ಪತ್ತೆಯಾಗಿದೆ ಎಂಬ ಸುದ್ದಿ ಪ್ರಚಲಿತದಲ್ಲಿದ್ದರೂ ಈ ಬಗ್ಗೆ ಟ್ರಸ್ಟ್‌ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ಇವನ್ನೂ ಓದಿ