ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಟ್ಟಾಭಿಷೇಕ ಮುಹೂರ್ತ?: ತ್ರಿವರ್ಣ ಧ್ವಜ ಹಾರಿಸಲಿರುವ ರಾಹುಲ್ (Rahul Gandhi | Coronation | Congress | AICC | Sonia Gandhi)
PTI
ಪಟ್ಟಾಭಿಷೇಕಕ್ಕೆ ಮತ್ತಷ್ಟು ಸಮೀಪ ಬರುತ್ತಿದ್ದಾರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಭವ್ಯ ಭಾರತದ ಭಾವೀ ಪ್ರಧಾನಿ ರಾಹುಲ್ ಗಾಂಧಿ. ಸೋನಿಯಾ ಗಾಂಧಿ ಇದೀಗ ಎಲ್ಲೋ ಚಿಕಿತ್ಸೆಗೆ ಒಳಗಾಗುತ್ತಿದ್ದು, ಪಕ್ಷದ ವ್ಯವಹಾರಗಳಿಂದ ದೂರವಿರುವ ಈ ಸಂದರ್ಭದಲ್ಲಿ, ಯುವರಾಜನ ಪಟ್ಟಾಭಿಷೇಕಕ್ಕೆ ಮುನ್ಸೂಚನೆಯೋ ಎಂಬಂತೆ ಪಕ್ಷದ ವಿಧಿ ವಿಧಾನವನ್ನು ನೆರವೇರಿಸುವ ಗೌರವವನ್ನು ಅವರಿಗೆ ನೀಡುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ. ಅದೆಂದರೆ, ಸ್ವಾತಂತ್ರ್ಯ ದಿನ ಧ್ವಜಾರೋಹಣ ಮಾಡುವುದು. ಇದು ಅತ್ಯಂತ ಮಹತ್ವದ ಹೊಣೆಗಾರಿಕೆಯೂ, ಗೌರವವೂ ಮತ್ತು ಭವಿಷ್ಯದ ದ್ಯೋತಕವೂ ಹೌದು.

ಧ್ವಜಾರೋಹಣ ಮಾಡಲಾರೆ ಎಂದೇನಾದರೂ ಅವರು ಹೇಳಿದರೆ, ಅತ್ಯಂತ ಹಿರಿಯ ಕಾಂಗ್ರೆಸಿಗ, ಪಕ್ಷದ ಖಜಾಂಚಿ, ಔಪಚಾರಿಕ ಅನುಕ್ರಮಣಿಕೆಯಲ್ಲಿ ಸೋನಿಯಾ ಗಾಂಧಿಯ ನಂತರದ ಸ್ಥಾನದಲ್ಲಿರುವ ಮೋತಿಲಾಲ್ ವೋರಾ ಅವರಿಗೆ ಈ ಅವಕಾಶ ದೊರೆಯುವ ಸಾಧ್ಯತೆಗಳಿವೆ.

ರಾಹುಲ್ ಗಾಂಧಿ ಈ ಬಾರಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮುಖ್ಯಾಲಯದಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸುತ್ತಾರೆ ಎಂಬುದು ಬಹುತೇಕ ಖಚಿತ. ತನ್ನ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಅಮೆರಿಕದ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿರುವ ರಾಹುಲ್ ಗಾಂಧಿ, ಸ್ವಾತಂತ್ರ್ಯ ದಿನದ ವೇಳೆಗೆ ಮರಳಿ ಬರುತ್ತಾರೆಂದು ನಿರೀಕ್ಷಿಸಲಾಗಿದೆ.

ಸೋನಿಯಾ ಗಾಂಧಿ ಇಲ್ಲದ ಕಾರಣ, ರಾಹುಲ್ ಗಾಂಧಿಯ ಅನುಪಸ್ಥಿತಿಯಲ್ಲೇ ಸಭೆ ಸೇರಿದ್ದ ಕಾಂಗ್ರೆಸ್ ಕೋರ್ ಕಮಿಟಿಯು, ರಾಹುಲ್ ಹೆಸರಿನಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆಗಸ್ಟ್ 15ರಂದು 24 ಅಕ್ಬರ್ ರೋಡ್‌ನಲ್ಲಿರುವ ಕಾಂಗ್ರೆಸ್ ಮುಖ್ಯಾಲಯದಲ್ಲಿ ಸೋನಿಯಾ ಸ್ಥಾನದಲ್ಲಿ ನಿಂತು ರಾಹುಲ್ ಅವರು ಧ್ವಜಾರೋಹಣ ಮಾಡಬೇಕೆಂದು ನಿರ್ಧರಿಸಿದೆ.

ಬದಲಾವಣೆ ನಿರಂತರ ಎಂಬ ಸಂದೇಶವನ್ನು ಕಾಂಗ್ರೆಸ್‌ಗೆ ಮತ್ತು ದೇಶದ ಜನತೆಗೆ ತೋರಿಸಿಕೊಡಬೇಕಿದೆ. ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂಬ ಸಂದೇಶವೂ ಇದರಲ್ಲಿದೆ ಎಂದಿದ್ದಾರೆ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಬಗ್ಗೆ ಹೇಳುವುದಾದರೆ, ಅವರಿಗಾಗಿಯೇ ಪ್ರಧಾನಿ ಗಾದಿಯೂ ಕಾದಿದೆ. ಕೆಲವರ ಕುಹಕದಂತೆ, ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಆಯ್ಕೆಯು ಕೇವಲ ತಾತ್ಕಾಲಿಕ ವ್ಯವಸ್ಥೆ. ರಾಹುಲ್ ಅವರು ಪ್ರಧಾನಿ ಹುದ್ದೆ ಅಲಂಕರಿಸಲು ಮಾನಸಿಕವಾಗಿ ಸಿದ್ಧರಾಗುವವರೆಗೂ ಈ ಹುದ್ದೆಯಲ್ಲಿ ಒಬ್ಬ ನಿಷ್ಠರನ್ನು ಕೂರಿಸಬೇಕೆಂಬ ಕಾರಣಕ್ಕಾಗಿಯೇ ಜನರಿಂದ ನೇರವಾಗಿ ಆಯ್ಕೆಯಾಗದ, ಸ್ವಚ್ಛ ಚಾರಿತ್ರ್ಯದ ರಾಜ್ಯಸಭಾ ಸದಸ್ಯ ಸಿಂಗ್ ಅವರನ್ನು ಆರಿಸಲಾಗಿತ್ತು.

ಸೋನಿಯಾ ಗಾಂಧಿ ಆರೋಗ್ಯ ಕಾರಣಗಳಿಂದಾಗಿ ಇನ್ನೂ ಕೆಲವು ದಿನಗಳ ಕಾಲ ಸಕ್ರಿಯ ರಾಜಕಾರಣದಿಂದ ದೂರವುಳಿಯುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ನಾಯಕ, ಭವಿಷ್ಯದ ಪ್ರಧಾನಿಯನ್ನು ಕುರ್ಚಿಯ ಸನಿಹಕ್ಕೆ ಕರೆದೊಯ್ಯಲು ಪಕ್ಷದೊಳಗಿರುವ ಗಾಂಧಿ ಕುಟುಂಬದ ನಿಷ್ಠರು ಇದೇ ಸುಸಮಯ ಎಂದುಕೊಳ್ಳತೊಡಗಿದ್ದಾರೆ. ಆದರೂ, ರಾಹುಲ್ ಅಂತೂ ಪ್ರಧಾನಿ ಗಾದಿಗೆ ಹತ್ತಿರ ಹತ್ತಿರವಾಗುತ್ತಿರುವುದರಲ್ಲಿ ಸಂದೇಹವಿಲ್ಲ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ರಾಹುಲ್ ಗಾಂಧಿ, ಪಟ್ಟಾಭಿಷೇಕ, ಭಾವಿ ಪ್ರಧಾನಿ, ಕಾಂಗ್ರೆಸ್, ಎಐಸಿಸಿ, ಧ್ವಜಾರೋಹಣ, ಸೋನಿಯಾ ಗಾಂಧಿ, ಭಾರತ ರಾಷ್ಟ್ರೀಯ ಕಾಂಗ್ರೆಸ್