ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅನಿವಾಸಿ ಕನ್ನಡಿಗ » ಜು.9: ಬೆಂಗ್ಳೂರಲ್ಲಿ ಅಮೆರಿಕಾ ಕನ್ನಡಿಗರ ಅಮೆರಿಕನ್ನಡೋತ್ಸವ (Amerikannadotsava in Bangalore | Navika | America Kannadiga)
PR
ಅಮೆರಿಕಾದ ಕನ್ನಡಿಗರು ತಮ್ಮ ಪ್ರತಿಭೆಯನ್ನು ತವರು ನೆಲದ ಜನರಿಗೆ ಉಣಬಡಿಸುವ 'ಅಮೆರಿಕನ್ನಡೋತ್ಸವ'ವನ್ನು ಅಮೆರಿಕಾದ 'ನಾವಿಕ' ಸಂಘಟನೆ (ನಾರ್ತ್ ಅಮೆರಿಕಾ ವಿಶ್ವ ಕನ್ನಡಿಗರ ಆಗರ), ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ (ಎನ್ಆರ್ಐ ಫೋರಮ್) ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಜುಲೈ 9 ಮತ್ತು 10ರಂದು ನಡೆಸಲಿದೆ ಎಂದು 'ನಾವಿಕ' ಅಧ್ಯಕ್ಷ ಡಾ.ಕೇಶವ ಬಾಬು ಹೇಳಿದ್ದಾರೆ.

ತಾಯ್ನಾಡಿನಿಂದ ದೂರದಲ್ಲಿರುವ ಕನ್ನಡಿಗರ ಮುಂದಿನ ಪೀಳಿಗೆಗೆ ಈ ನೆಲದ ಕಂಪು, ಭಾಷೆಯ ಇಂಪು ಮತ್ತು ಸಂಸ್ಕೃತಿಯ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಅಮೆರಿಕಾದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಯಶಸ್ವಿ ಹಾಗೂ ನಿಪುಣ ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಉತ್ತರೋತ್ತರ ಬೆಳವಣಿಗೆಗೆ ಶ್ರಮಿಸಲು ಸಿದ್ಧರಿರುವ ಇವರಿಗೆ ವೇದಿಕೆಯಾಗಿ ಈ ಕಾರ್ಯಕ್ರಮ ಕಾರ್ಯನಿರ್ವಹಿಸಲಿದೆ ಎಂದು ಅವರು ವಿವರಿಸಿದರು.

ಅಮೆರಿಕಾದಲ್ಲಿ ನೆಲೆಸಿರುವ ಪೋಷಕರಿಗೆ ತಮ್ಮ ಮಕ್ಕಳ ಸಾಧನೆಯನ್ನು ತಾಯ್ನೆಲದಲ್ಲಿ ತೋರ್ಪಡಿಸಬೇಕು ಎಂಬ ಆಶಯ ಹಾಗೂ ಈಡೇರದ ಬಯಕೆ ಯಾವತ್ತೂ ಇದೆ. ಈ ಆಶಯ ಈಡೇರಿಕೆಗೆ 'ಅಮೆರಿಕನ್ನಡೋತ್ಸವ' ವೇದಿಕೆಯೊದಗಿಸಲಿದೆ. ಈಗಾಗಲೇ ಸಾಕಷ್ಟು ಮಕ್ಕಳು ಕರ್ನಾಟಕದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಒಪ್ಪಿಕೊಂಡಿದ್ದಾರೆ ಎಂದವರು ಮಾಹಿತಿ ನೀಡಿದರು.

ಅಮೆರಿಕನ್ನಡಿಗರ ಭಾವನೆಗಳನ್ನು ಹೊರಗೆಡಹುವ ನಿಟ್ಟಿನಲ್ಲಿ ಅನೇಕ ಗೋಷ್ಠಿ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕನ್ನಡ ನಾಡಿನ ಕಲೆಯನ್ನು ಅಮೆರಿಕಾದಲ್ಲಿ ಬಿತ್ತರಿಸುತ್ತಿರುವ ಅನೇಕ ಸಾಧಕರ ಕಲಾ ಪ್ರದರ್ಶನ, ಅಲ್ಲಿಯ ಜನರ ಸಾಹಿತ್ಯ ಅಭಿರುಚಿ, ಸಾಮಾಜಿಕ ಸಂಬಂಧಗಳು ಸೂಕ್ಷ್ಮತೆ ಕಳೆದುಕೊಳ್ಳುತ್ತಿರುವ ಬಗ್ಗೆ ಇರುವ ಕಳವಳ, ಕರ್ನಾಟಕದ ಸುಧಾರಣೆಗೆ ಅಲ್ಲಿ ನೆಲೆಸಿದ ಜನರ ವಿವಿಧ ಯೋಜನೆಗಳು. ಕರ್ನಾಟಕದ ವ್ಯವಹಾರಸ್ಥರು ಮತ್ತು ಅಲ್ಲಿ ನೆಲೆಯಾಗಿರುವ ವ್ಯವಹಾರಸ್ಥರ ನಡುವಿನ ವ್ಯಾವಹಾರಿಕ ಅವಕಾಶಗಳು, ಹೊರಗುತ್ತಿಗೆ, ಅಮೆರಿಕಾದಲ್ಲಿರುವ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರು ಮುಂತಾದ ವಿಷಯಗಳ ಕುರಿತಾದ ಗೋಷ್ಠಿ ಹಾಗೂ ಪ್ರದರ್ಶನಗಳೂ ಕೂಡ ನಡೆಯಲಿವೆ.

ಅಲ್ಲದೆ ಅಮೆರಿಕಾಕ್ಕೆ ಹೋಗಿ ತಮ್ಮ ಕಲೆಯ ಪ್ರದರ್ಶನ ಮಾಡಲು ಸಾಧ್ಯವಿಲ್ಲದ ಕೆಲವು ನಿಪುಣ ಹಾಗೂ ಅಮೆರಿಕಾದ ಜನತೆ ನೋಡಲು ಬಯಸುವ ಕಲಾಪ್ರಕಾರಗಳ ಪ್ರದರ್ಶನವನ್ನು ಕೂಡಾ ಈ ಸಮಾರಂಭದಲ್ಲಿ ನಡೆಸಲಾಗುತ್ತದೆ ಎಂದು ಅಧ್ಯಕ್ಷ ಡಾ. ಕೇಶವ ಬಾಬು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರದ ಎನ್ಆರ್ಐ ಫೋರಮ್ ಉಪಾಧ್ಯಕ್ಷರಾದ ಗಣೇಶ್ ಕಾರ್ಣಿಕ್, ಕಾರ್ಯಕ್ರಮದ ಕರ್ನಾಟಕ ಸಂಚಾಲಕರಾದ ಯಶವಂತ ಸರದೇಶಪಾಂಡೆ ಉಪಸ್ಥಿತರಿದ್ದರು.

'ನಾವಿಕ' ಅಮೆರಿಕಾದಲ್ಲಿ ಸ್ಥಾಪನೆಗೊಂಡ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ವಿಶ್ವದೆಲ್ಲೆಡೆಯ ಕನ್ನಡಿಗರ ಮತ್ತು ಕನ್ನಡ ಸಂಘಟನೆಗಳ ಆಶೋತ್ತರಗಳನ್ನು ಒಂದು ಸೂರಿನಡಿ ತಂದು, ಕನ್ನಡ ಭಾಷೆ, ಸಂಸ್ಕೃತಿ, ಉಚ್ಚ ಪರಂಪರೆಯನ್ನು ತಾಯ್ನೆಲದಿಂದ ದೂರವಿರುವ ಮುಂದಿನ ಪೀಳಿಗೆಗೆ ಪರಿಚಯಿಸುವ, ಉಳಿಸಿ, ಬೆಳೆಸುವ ಉದ್ದೇಶದಿಂದ ಆರಂಭಗೊಂಡ ಸಂಸ್ಥೆಯಾಗಿದೆ.