ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದ್ದ ವಿದ್ಯಾರ್ಥಿನಿ ಮೇಘಶ್ರೀ ನಗರದ ವಿಲ್ಸನ್‌ಗಾರ್ಡನ್‌ನಲ್ಲಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ತನ್ನ ಸಾವಿಗೆ ಶಿಕ್ಷಕರೇ ಕಾರಣ ಎಂಬುದಾಗಿ ಪತ್ರವನ್ನು ಬರೆದಿಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಆರ್.ವಿ.ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೇಘಶ್ರೀ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದಳೆಂದು ಶಿಕ್ಷಕರು ಆಕೆಯ ಪೋಷಕರನ್ನು ಕರೆತರುವಂತೆ ಸೂಚಿಸಿದ್ದರು. ಆದರೆ ಈಕೆ ಹೆತ್ತವರನ್ನು ಕರೆದುಕೊಂಡು ಹೋಗದ ಪರಿಣಾಮ, ಕುಪಿತರಾದ ಶಿಕ್ಷಕರು ಈಕೆಯನ್ನು ತರಗತಿಗೆ ಸೇರಿಸಿರಲಿಲ್ಲವಾಗಿತ್ತು.
ಈ ಘಟನೆಯಿಂದ ಆಘಾತಗೊಂಡ ಮೇಘಶ್ರೀ ಶಾಲೆಯಿಂದ ವಾಪಸು ಬಂದವಳೇ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಳು. ಇದೀಗ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಲಕ ರಾಜು ಹಾಗೂ ಅಶ್ವತ್ಥಮ್ಮ ದಂಪತಿಗೆ ತಮ್ಮ ಪುತ್ರಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದರು. ಮೇಘಶ್ರೀಯ ಸಹೋದರಿ ಅಕ್ಷತಾ ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಪರೀಕ್ಷೆಯಲ್ಲಿ ತನಗೆ ಕಡಿಮೆ ಅಂಕ ಬಂದಿರುವುದಾಗಿ ಮೇಘಶ್ರೀ ತಿಳಿಸಿದ್ದಳು. ಶಾಲೆಯಲ್ಲಿ ಶಿಕ್ಷಕರ ವರ್ತನೆಯಿಂದ ಮನನೊಂದು ಮೇಘ ಸಾವಿಗೆ ಶರಣಾಗಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.
|