ವಿಶ್ವಾಸಮತದ ಸಂದರ್ಭದಲ್ಲಿ ಯುಪಿಎ ಸರ್ಕಾರ ಪರ ಮತ ಚಲಾಯಿಸಿದ ಬಿಜೆಪಿ ಸಂಸದ ಸಾಂಗ್ಲಿಯಾನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೈಗ್ರೌಂಡ್ಸ್ ಬಳಿ ಇದ್ದ ಅವರ ಕಚೇರಿ ಮೇಲೆ ಬುಧವಾರ ಮಧ್ಯಾಹ್ನ ಕೆಲವರು ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿದ ಪರಿಣಾಮವಾಗಿ ಕಚೇರಿಯ ಗಾಜುಗಳು ಪುಡಿಯಾಗಿವೆ. ಇದು ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಯುಪಿಎ ವಿಶ್ವಾಸ ಮತಯಾಚನೆ ವೇಳೆ ಸರಕಾರದ ವಿರುದ್ಧ ಮತ ಚಲಾಯಿಸುವಂತೆ ರಾಜ್ಯ ಬಿಜೆಪಿ ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಹಾಗೂ ಇತರ ನಾಯಕರು ಸೂಚಿಸಿದ್ದರು. ಆದರೆ ಸಾಂಗ್ಲಿಯಾನ ಅದನ್ನು ಲೆಕ್ಕಿಸದೆ ಯುಪಿಎ ಪರ ಮತ ಹಾಕಿದ್ದರಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರತಿಭಟನೆ: ಯುಪಿಎ ಪರ ಮತಹಾಕುವಂತೆ ಹಣದ ಆಮಿಷ ಒಡ್ಡಿದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಯುಪಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
|