ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವ ಪರಿಣಾಮ ವಿದ್ಯುತ್ ಅಭಾವ ಎದುರಿಸಬೇಕಾಗಿದೆ ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ರಾತ್ರಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿದ್ಯುತ್ ಅಭಾವದ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಸಭೆಯ ವೇಳೆ ಮಾತನಾಡಿದ ಈಶ್ವರಪ್ಪ, ಇನ್ನು 15 ದಿನಗಳ ಕಾಲ ಮಳೆ ಬಾರದಿದ್ದರೆ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸರ್ವ ಪ್ರಯತ್ನ ನಡೆಸುತ್ತದೆ. ಆದರೆ ಮಳೆ ಬಾರದೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾದರೆ ದೇವರೇ ಕಾಪಾಡಬೇಕು ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದ್ದು, ಲೋಡ್ ಶೆಡ್ಡಿಂಗ್ ಪ್ರಮಾಣ ಇನ್ನಷ್ಟು ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಪ್ರತಿಪಕ್ಷಗಳು, ಹೊರ ರಾಜ್ಯ ಹಾಗೂ ಖಾಸಗಿ ಕಂಪೆನಿಗಳಿಂದ ವಿದ್ಯುತ್ ಖರೀದಿಸಿ, ಲೋಡ್ ಶೆಡ್ಡಿಂಗ್ ತಪ್ಪಿಸುವಂತೆ ಆಗ್ರಹಿಸಿದವು.
ಇದೇ ವೇಳೆ ರಾಜ್ಯದಲ್ಲಿ ಪ್ರತಿದಿನ 100 ದಶಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ನೀಡುವ ಪರಿಸ್ಥಿತಿ ರಾಜ್ಯದಲ್ಲಿಲ್ಲ ಎಂದು ಈಗಾಗಲೇ ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದು, ಸದ್ಯದ ಮಟ್ಟಿಗೆ ಶೇ. 20ರಷ್ಟು ವಿದ್ಯುತ್ ಕೊರತೆ ರಾಜ್ಯದಲ್ಲಿ ಕಂಡು ಬಂದಿದೆ. ಅದಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಮುಂದುವರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
|