ತಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲು ಹವಣಿಸುತ್ತಿರುವ ನಾಗಾರ್ಜುನ ಶಾಖೋತ್ಪನ್ನ ಸ್ಥಾವರದ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಯುಪಿಎ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಗೈರುಹಾಜರಾದ ಆರೋಪದ ಮೇಲೆ ಉಚ್ಚಾಟನೆಗೊಂಡಿರುವ ಉಡುಪಿ ಕ್ಷೇತ್ರದ ಬಿಜೆಪಿ ಸಂಸದೆ ಮನೋರಮಾ ಮಧ್ವರಾಜ್ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅವರು ಬುಧವಾರದಂದು ಮಲ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅಣು ಒಪ್ಪಂದದಿಂದ ದೇಶಕ್ಕೆ ಯಾವುದೇ ಕೇಡು ಉಂಟಾಗುವುದಿಲ್ಲ ಎಂಬುದಾಗಿ ತಾನು ನಂಬಿರುವುದಾಗಿ ಹೇಳಿದರು. ಆದರೆ ತಾನು ಮತದಾನದಿಂದ ದೂರ ಉಳಿದಿದ್ದೇನೆ ವಿನಃ, ಪಕ್ಷದ ವಿಪ್ ವಿರುದ್ಧ ತಾನು ನಡೆದುಕೊಂಡಿಲ್ಲ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ಶಿಷ್ಟಾಚಾರವನ್ನು ಧಿಕ್ಕರಿಸಿ ಯುಪಿಎಗೆ ಬೆಂಬಲ ನೀಡಿದ್ದಾರೆಂದು ಬಿಜೆಪಿ ಮಧ್ವರಾಜ್ ಅವರನ್ನು ಬುಧವಾರ ಉಚ್ಚಾಟನೆಗೊಳಿಸಿತ್ತು. ಪಕ್ಷದ ನಿರ್ಧಾರವನ್ನು ತಾನು ಗಣನೆಗೆ ತೆಗೆದುಕೊಳ್ಳಲಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ತನ್ನ ವಿರುದ್ಧ ಪಕ್ಷ ಕೈಗೊಳ್ಳುವ ಕ್ರಮದ ಬಗ್ಗೆ ತನ್ನನ್ನು ಯಾರೂ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.
ಜು.22ರಂದು ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಗೈರು ಹಾಜರಾದ ಮತ್ತು ಯುಪಿಎ ಪರ ಮತಚಲಾಯಿಸಿದ್ದಕ್ಕಾಗಿ ಮನೋರಮಾ ಮಧ್ವರಾಜ್ ಸೇರಿದಂತೆ ಬಿಜೆಪಿಯ ಎಂಟು ಮಂದಿ ಸಂಸದರನ್ನು ಉಚ್ಚಾಟಿಸಿತ್ತು.
|