ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಯಿಬಾಬಾ ಗ್ರಾನೈಟ್ ವಿಗ್ರಹ ಕಣ್ಣು ತೆರೆಯುವ ಮೂಲಕ ಪವಾಡ ಸೃಷ್ಟಿಸಿದ ಸುದ್ದಿ ಇದೀಗ ಸುತ್ತಮುತ್ತಲ ಜಿಲ್ಲೆಗಳಿಗೆ ಹಬ್ಬುವ ಮೂಲಕ ಜನ ಸಾಗರೋಪಾದಿಯಲ್ಲಿ ಬಂದು ಸಾಯಿಬಾಬಾನ ದರ್ಶನಕ್ಕೆ ನೂಕುನುಗ್ಗಲು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರಿಂದ 'ಕುರುಡು ಕಾಂಚಾಣ'ದ ವೃಷ್ಟಿಯಾಗತೊಡಗಿದೆ.
ಈ ಪವಾಡ ನಡೆದದ್ದು ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರ ದೇವಾಲಯದ ಪಕ್ಕದಲ್ಲಿರುವ ಮನೆಯೊಂದರಲ್ಲಿ. ಕೆಂಪೇಗೌಡ ನಗರ ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ದರೂ ಪೊಲೀಸರು ಏನೂ ಮಾಡಲಾಗದೆ ಮೂಕಪ್ರೇಕ್ಷಕರಾಗಿದ್ದಾರೆ.
ಶಿರ್ಡಿಸಾಯಿ ಬಾಬಾ ಕೃಪೆ ಪಡೆದಿದ್ದೇನೆ ಎಂದು ಹೇಳಿಕೊಳ್ಳುವ ಮನೆಯ ಮಾಲೀಕ ಖಾಸಗಿ ಚಾನೆಲ್‌ವೊಂದಕ್ಕೆ ಹೇಳಿದ್ದು ಹೀಗೆ.. ನಾನೇನು ಬಾಬಾನನ್ನು ಕಣ್ಣುತೆರೆ ಎಂದು ಪೂಜಿಸುತ್ತಾ ಕುಳಿತಿರಲಿಲ್ಲ. ಆದರೂ ಬಾಬಾ ಕಣ್ಣು ತೆರೆದು ಕೃಪೆ ತೋರಿದ್ದಾನೆ. ಕಣ್ಣು ತೆರೆದದ್ದನ್ನು ಮೊದಲು ನೋಡಿದವನು ನಾನಲ್ಲ. ನಾನು ನನ್ನ ಪಾಡಿಗೆ ಮನೆಯ ಕೆಲಸದಲ್ಲಿ ನಿರತನಾಗಿದ್ದೆ. ಆದರೆ ಇದನ್ನು ನನ್ನ ಮಗ ನೋಡಿ ನನಗೆ ಹೇಳಿದ..'
ಆದರೆ ಈ ಕಟ್ಟುಕಥೆಯನ್ನು ಜನ ಟಿವಿಯಲ್ಲಿ ನೋಡಿದ್ದೇ ತಡ ಬಾಬಾ ಕಣ್ಣು ತೆರೆದ ಮನೆಗೆ ಪ್ರವಾಹ ರೀತಿಯಲ್ಲಿ ಬಂದರು, ದರ್ಶನ ಪಡೆದು ಧನ್ಯರಾಗಿ ಕಾಂಚಾಣ ವೃಷ್ಟಿಯನ್ನೂ ಹರಿಸಿದರು. ಎಷ್ಟು ಕಾಣಿಕೆ ಸಂಗ್ರಹವಾಯಿತು.. ಏನಾಯಿತು ಎಂಬುದನ್ನು ಯಾರೂ ಕೇಳುವಂತಿಲ್ಲ..
ಆದರೆ ಕೆಲವರ ಪ್ರಕಾರ ಬಾಬಾನ ಕೃಪೆ ಪಡೆದ ಮನೆಯ ಮಾಲಿಕ ಇರುವ ಮನೆ ಮಠವೊಂದಕ್ಕೆ ಸೇರಿದೆ. ಬಿಬಿಎಂಪಿಯಿಂದ ಮನೆ ತೆರವುಗೊಳಿಸಲು ನೋಟಿಸ್ ಬಂದ ಕಾರಣ ಮನೆಯ ಮಾಲಿಕ ಈ ರೀತಿ ನಾಟಕವಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಅವರ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಮನೆಯ ಮಾಲಿಕ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಯಾವೊಬ್ಬ ಭಕ್ತರಿಗೂ ವಿಗ್ರಹದ ಹತ್ತಿರ ಹೋಗಿ ಪರಿಶೀಲಿಸಲು ಅವಕಾಶ ಮಾಡಿಕೊಡಲಿಲ್ಲ.
ಮೊದಮೊದಲು ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪೊಲೀಸರೂ ಇದನ್ನು ಕೇಳುವ ಧೈರ್ಯ ತೋರಲಿಲ್ಲ. ಏನೇ ಆದರೂ ಭಕ್ತರ ಜಮೆಯೂ ಕಡಿಮೆ ಯಾಗಲಿಲ್ಲ.. ಮತ್ತಷ್ಟು ಹೆಚ್ಚಾಯಿತು.. ಜೊತೆಗೆ ಕಾಣಿಕೆ ಮಾತ್ರ ಹೆಚ್ಚಾಗತೊಡಗಿದೆ..!
ಇದೆಲ್ಲ ಕಳೆದು ಐದಾರು ದಿನಗಳಾದ ನಂತರ ಮನೆಯ ಮಾಲಿಕ ಸಂಗ್ರಹವಾದ ಕಾಣಿಕೆಯನ್ನು ಶಿರ್ಡಿಗೆ ಅರ್ಪಿಸುತ್ತೇನೆ.. ಅದಕ್ಕಾಗಿ ಎಲ್ಲವನ್ನು ಶಿರ್ಡಿಗೆ ಒಯ್ಯುವ ತಯಾರಿ ಮಾಡಿದ್ದೇನೆ ಎನ್ನುತ್ತಿದ್ದಾರೆ. ಏತನ್ಮಧ್ಯೆ ಈತ ಸಂಗ್ರಹವಾದ ಹಣವನ್ನು ಕೆಲವು ಖಾಸಗಿ ಸಂಸ್ಥೆಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. ನಿಜಕ್ಕೂ ಆತ ಹಾಗೆ ಮಾಡುತ್ತಾನಾ ಎಂಬುದೇ ಪ್ರಜ್ಞಾವಂತರ ಮುಂದಿರುವ ಯಕ್ಷ ಪ್ರಶ್ನೆ.
ಜೊತೆಗೆ ಬಾಬಾನ ಇನ್ನೊಂದು ವಿಗ್ರಹದ ಬಲಗಣ್ಣು ಬೆಂಗಳೂರಿನ ವ್ಯಾಪ್ತಿಯಲ್ಲೇ ಇರುವ ಯಲಹಂಕದಲ್ಲಿ ತೆರೆದಿದೆ, ಕೊಳ್ಳೆಗಾಲದಲ್ಲೂ ತೆರೆದಿದೆ, ಹೈದಾರಾಬಾದ್ನಲ್ಲೂ ತೆರೆದಿದೆ.. ಅಲ್ಲೂ ಭಕ್ತರೂ ಇದೇ ರೀತಿ ತಮ್ಮ ಭಕ್ತಿ ಮೆರೆಯುತ್ತಿದ್ದಾರೆ ಎಂಬ ವರದಿಗಳು ಬಂದಿವೆ.. ಆದರೆ, ಇದರ ಸತ್ಯಾಸತ್ಯತೆಯನ್ನು ಅರಿಯುವ, ಪರಿಶೀಲಿಸುವ ಗೋಜಿಗೆ ಯಾವ ಪ್ರಜ್ಞಾವಂತರೂ ಮುಂದಾಗದಿರುವುದು ಜನಮರುಳೋ ಜಾತ್ರೆ ಮರುಳೋ ಎಂಬ ನಾಣ್ಣುಡಿಗೆ ಇವರೂ ಜೋತುಬಿದ್ದರೇ ಎಂದೆನಿಸದಿರದು.
|