ಮನುಕುಲದ ಮಹಾಮಾರಿ ಏಡ್ಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶೇಷವಾಗಿ ತಯಾರಿಸಲಾಗಿರುವ ರೆಡ್ ರಿಬ್ಬನ್ ರೈಲು ಆಗಮಿಸಿದ್ದು,ರಾಜಧಾನಿಯಲ್ಲಿ ಮೂರು ದಿನಗಳ ಕಾಲ ತಂಗಲಿದೆ.
ಗುರುವಾರ ಬೆಂಗಳೂರು ತಲುಪಿರುವ ರೈಲು, ಕಂಟೋನ್ಮೆಂಟ್ ನಿಲ್ದಾಣದಲ್ಲಿ ಮೂರು ದಿನಗಳ ಕಾಲ ತಂಗಲಿದೆ. ರೈಲ್ವೆ ಇಲಾಖೆಯು ವಿವಿಧ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ರೂಪಿಸಿರುವ ಈ ಯೋಜನೆ ದೇಶದ ವಿವಿಧ ಭಾಗದಲ್ಲಿ ಸಂಚರಿಸಿ ಎಚ್ಐವಿ-ಏಡ್ಸ್ ಕುರಿತು ಅರಿವು ಮೂಡಿಸುವಲ್ಲಿ ಗಮನಾರ್ಹವಾಗಿ ಯಶಸ್ವಿಯಾಗಿದೆ.
ರೈಲಿನ ವಿವಿಧ ಬೋಗಿಗಳಲ್ಲಿ ಜಾಗೃತಿ ಮೂಡಿಸುವ ಭಿತ್ತಿಪತ್ರ, ರೇಖಾ ಚಿತ್ರಗಳನ್ನು ಅಳವಡಿಸಿದ್ದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ಜಾನಪದ ತಂಡಗಳು ಈ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನೂ ನಡೆಸಿಕೊಡಲಿರುವುದು ಆಕರ್ಷಣೆ ಹೆಚ್ಚಲು ಪ್ರಮುಖ ಕಾರಣವಾಗಿದೆ.
ಪ್ರತಿ ಬಾರಿಯೂ 60 ಜನರಂತೆ ಸುಮಾರು ಎರಡು ಗಂಟೆಗಳ ಕಾಲ ತಿಳಿವಳಿಕೆ ಪಡೆಯುವ ವ್ಯವಸ್ಥೆ ಈ ರೈಲಿನಲ್ಲಿದ್ದು, ಮೊದಲ ದಿನ ಆಸಕ್ತರು ಮಾಹಿತಿ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು.
|