ಮಳೆ ಆಧಾರಿತ ಕೃಷಿ ಭೂಮಿಯಲ್ಲಿ ಸಾಗುವಳಿ ಮಾಡುವ ರಾಜ್ಯದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜ ಖರೀದಿಸಲು ತಕ್ಷಣದಿಂದಲೇ ಒಂದು ಸಾವಿರ ರೂ.ಗಳ ಸಹಾಧನವನ್ನು ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗೊಬ್ಬರ ಬಿತ್ತನೆ ಬೀಜ ಖರೀದಿಗಾಗಿ ಪ್ರಕಟಿಸಲಾಗಿರುವ ಸಹಾಯಧನ ಆದೇಶ ಶೀಘ್ರವೇ ಜಾರಿಗೆ ಬರಲಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ವಿವರಣೆ ನೀಡಿದರು.
ರಾಜ್ಯದಲ್ಲಿ ಸುಮಾರು 56 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿದ್ದು, ಇವರಿಗೆ ಘೋಷಿಸಿರುವ ಸಹಾಯಧನಕ್ಕಾಗಿ ಸರ್ಕಾರ 5ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಳೆ ಆಧಾರಿತ ಜಮೀನಿನಲ್ಲಿ ಸಾಗುವಳಿ ಮಾಡುವ ರೈತರಿಗೆ ಈ ಹಣ ದೊರೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಇದೇ ವೇಳೆ ಭಾಗಲಕ್ಷ್ಮಿ ಯೋಜನೆಯು ಹೆಣ್ಣುಮಕ್ಕಳಿಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಠೇವಣಿ ಹಣವನ್ನು 10 ಸಾವಿರದಿಂದ 20 ಸಾವಿರಕ್ಕೆ ಏರಿಸಲಾಗಿದೆ ಎಂದು ವಿವರಿಸಿದ ಅವರು, ಈ ಮೂಲಕ 18 ವರ್ಷ ತುಂಬಿದಾಗ 1 ಲಕ್ಷ ರೂಪಾಯಿ ಹಣ ಸಿಗುವಂತಾಗುತ್ತದೆ ಎಂದು ತಿಳಿಸಿದರು.
|