ಆಪರೇಷನ್ ಕಮಲದಲ್ಲಿಯೇ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ದಿಯತ್ತ ಗಮನ ಹರಿಸುತ್ತಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬರ ಹಾಗೂ ನೆರೆ ಪೀಡಿತದಿಂದ ತತ್ತರಿಸುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಂತ್ರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರ ಬದಲಾಗಿ ಸರ್ಕಾರ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ಮಗ್ನವಾಗಿದೆ ಎಂದು ದೂರಿದರು.
ಮುಂಗಾರಿನಲ್ಲಿ ಸುಮಾರು 73.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ ಇದುವರೆಗೆ ಕೇವಲ 40.90 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ.
ಕಳೆದ ತಿಂಗಳು 124 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಅಲ್ಲದೆ, 191 ಗ್ರಾಮಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿವರಿಸಿದರು.
ಇದೇ ವೇಳೆ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಗಣಿ ಲಂಚ ಪ್ರಕರಣದಲ್ಲಿ ಚನ್ನಿಗಪ್ಪ ಪಡೆದಿದ್ದ ಹಣದಲ್ಲಿ ಪಾಲು ಈಗ ಬಿಜೆಪಿ ನಾಯಕರಿಗೂ ಸಿಕ್ಕಿದೆಯೇ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಾಯಕರು ಅಧಿಕಾರ ಉಳಿಸಿಕೊಳ್ಳಲು ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆiz ಕುಂದು ಉಂಟಾಗಿದೆ ಎಂದು ಆರೋಪಿಸಿದರು.
|