ಆಪರೇಶನ್ ಕಮಲದ ಮೂಲಕ ವಲಸಿಗರಿಗೆ ಮಣೆ ಹಾಕ ಹೊರಟಿರುವ ಬಿಜೆಪಿ ಸರ್ಕಾರ ಈಗ ಸಂಕಷ್ಟಕ್ಕೀಡಾಗಿದೆ. ಈ ಸಂಬಂಧ ಪಕ್ಷದಲ್ಲಿನ ಆಂತರಿಕ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ.
ಬುಧವಾರ ಜೆಡಿಎಸ್‌ನಿಂದ ವಲಸೆ ಬಂದಿರುವ ಪ್ರಭಾವಿ ನಾಯಕ ಉಮೇಶ್ ಕತ್ತಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವ ಬಗ್ಗೆ ಅನೇಕ ಬಿಜೆಪಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕ ರೇಣುಕಾಚಾರ್ಯ ನೇತೃತ್ವದಲ್ಲಿ ಹಲವು ನಾಯಕರು ರಾಜೀನಾಮೆಗೆ ಮುಂದಾಗಿರುವ ಅಂಶ ಬಹಿರಂಗಗೊಂಡಿದೆ.
ಪಕ್ಷದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಪಕ್ಷದ ಏಳಿಗೆಗಾಗಿ ದುಡಿದಿರುವವರನ್ನು ಕಡೆಗಣಿಸಿ ಬೇರೆ ಪಕ್ಷದಿಂದ ಬಂದವರಿಗೆ ಸ್ಥಾನ ನೀಡುವ ಬಗ್ಗೆ ಅಸಮಾಧಾನಗೊಂಡಿರುವ ನಾಯಕರು ಇಂದು ರಾಜೀನಾಮೆ ಪತ್ರವನ್ನು ಸ್ಪೀಕರ್ ಜಗದೀಶ್ ಶೆಟ್ಟರ್‌ಗೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ಪೀಕರ್ ಅತೃಪ್ತರ ಜೊತೆ ಮಾತುಕತೆ ನಡೆಸಿದ್ದು ಅವರ ಮನವೊಲಿಕೆಗೆ ಮುಂದಾಗಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸೇರಿದಂತೆ ಹಲವು ಶಾಸಕರು ಅಕ್ಕ ಸಮ್ಮೇಳನಕ್ಕೆ ಅಮೆರಿಕಕ್ಕೆ ತೆರಳಲು ಸಿದ್ಧತೆಯಲ್ಲಿದ್ದಾಗ ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿ ಸಿದೆ.
|