ಆಪರೇಷನ್ ಕಮಲದಿಂದಾಗಿ ಮಂತ್ರಿಗಿರಿ ಕಳೆದುಕೊಂಡ ಬಿಜೆಪಿ ನಾಯಕ ಎಸ್.ಕೆ. ಬೆಳ್ಳುಬ್ಬಿಯವರಿಗೆ ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಎಂಎಸ್ಐಎಲ್)ನ ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ.
ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಿದ ಬೆಳ್ಳುಬ್ಬಿಯವರಿಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಅದರಂತೆ ಅವರಿಗೆ ಈ ಉನ್ನತ ಸ್ಥಾನವನ್ನು ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಮುಖ್ಯಮಂತ್ರಿಗಳ ತಂಡ ಅಮೆರಿಕ ಪ್ರವಾಸದಲ್ಲಿರುವುದರಿಂದ ಅಲ್ಲಿಂದ ವಾಪಸಾದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಉಮೇಶ್ ಕತ್ತಿಯವರಿಗೆ ಬಂದೀಖಾನೆ ಜೊತೆಗೆ ತೋಟಗಾರಿಕೆ ಖಾತೆಯನ್ನು ನೀಡಲಾಗಿದೆ. ಇನ್ನು ಮುಂದೆ ಯಾವುದೇ ಸಚಿವ ಖಾತೆಗಳು ಬದಲಾಗುವುದಿಲ್ಲ. ವಲಸೆ ಬಂದ ನಾಯಕರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪ್ರಮಾಣ ವಚನ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದ ಗೌಡ ಹಾಗೂ ಸಂಸದ ಅನಂತ್‌ಕುಮಾರ್ ಗೈರು ಹಾಜರಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬೆಳ್ಳುಬ್ಬಿಯವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಿರುವ ನಿರ್ಧಾರದ ಬಗ್ಗೆ ಇವರಿಬ್ಬರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
|